ಎನ್.ಆರ್.ಪುರದಲ್ಲಿ ಮತ್ತೊಮ್ಮೆ ಬೀಗತಿಯರ ಜಿದ್ದಾಜಿದ್ದಿ

Nrp pp building
Published on

ಎನ್.ಆರ್.ಪುರ: ಎನ್.ಆರ್‌ಪುರ ಪಟ್ಟಣ ಪಂಚಾಯಿತಿಯ ಎರಡನೇ ಅವಧಿಗೆ ಸರ್ಕಾರ ಸೋಮವಾರ ಮೀಸಲಾತಿ ಕಲ್ಪಿಸಿದ್ದು, ಅಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿ ಮಾಡಲಾಗಿದೆ.
ಪಪಂನ ಒಟ್ಟು 11ವಾರ್ಡ್‌ಗಳಲ್ಲಿ 9 ಕಾಂಗ್ರೆಸ್ ಬೆಂಬಲಿತ ಸದಸ್ಯರು, 2 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಯಾಗಿದ್ದರಿಂದ 1ನೇ ವಾರ್ಡ್‌ನ ಸದಸ್ಯೆ ಜುಬೇದಾ ಹಾಗೂ ಅವರ ಬೀಗತಿ 11ನೇ ವಾರ್ಡ್‌ನ ಸದಸ್ಯೆ ಸುರಯ್ಯಭಾನು ಅವರ ನಡುವೆ ತೀವ್ರ ಪೈಪೋಟಿ ಏರ್ಪಟಿತ್ತು.
ನಂತರ ಪಕ್ಷದ ಮುಖಂಡರು ಮೊದಲ ಅಧಿವಯ ಒಂದು ವರ್ಷ ಸುರಯ್ಯಭಾನು ಅವರಿಗೆ ಹಾಗೂ ಇನ್ನುಳಿದ ಒಂದೂವರೆ ವರ್ಷ ಜುಬೇದಾ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ತೀರ್ಮಾನಿಸಿ ಇಬ್ಬರನ್ನು ಸಮಾಧಾನಗೊಳಿಸಿದ್ದರು. ಇದೀಗ ಎರಡನೇ ಅವಧಿಯಲ್ಲೂ ಅಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿದ್ದು, ಈ ಬಾರಿಯೂ ವಾರ್ಡ್ ನಂ.1ರ ಬಿಸಿಎಂ ಎ ಮಹಿಳೆ ಮೀಸಲು ಕ್ಷೇತ್ರದಿಂದ ಗೆದ್ದಿರುವ ಜುಬೇದಾ ಹಾಗೂ ಬೀಗತಿ ಸುರಯ್ಯಭಾನು ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ರೀನಾ ಮೋಹನ್‌ಗೆ ಅವಕಾಶವಿದೆ. ಆದರೆ ರೀನಾ ಮೋಹನ್‌ಗೆ ಸದಸ್ಯರ ಬಲ ಇಲ್ಲದಿರುವುದರಿಂದ ಕಳೆದ ಬಾರಿಯಂತೆ ಈ ಬಾರಿಯೂ ಜುಬೇದಾ ಹಾಗೂ ಸುರಯ್ಯಭಾನು ನಡುವೆ ಮತ್ತೊಮ್ಮೆ ಪೈಪೋಟಿ ಬೀಳಲಿದೆ.
ಮೊದಲ ಅವಧಿಯ 1 ವರ್ಷ ಸುರಯ್ಯಭಾನು ಹಾಗೂ ಉಳಿದ ಒಂದುವರೆ ವರ್ಷ ಜುಬೇದಾ ಅಧ್ಯಕ್ಷರಾಗಿದ್ದಾರೆ. ಈ ಬಾರಿ ಕಳೆದ ಬಾರಿ ಒಂದೂವರೆ ವರ್ಷದ ಅಧಿಕಾರ ಅನುಭವಿಸಿದ ಜುಬೇದಾ ಅವರಿಗೆ ಸಮಾಧಾನ ಪಡಿಸಿ ಸುರಯ್ಯಭಾನು ಅವರಿಗೆ ಅಧ್ಯಕ್ಷ ಗದ್ದುಗೆಗೆ ಏರಿಸುವ ಸಾಧ್ಯತೆಗಳಿವೆ. ಆದರೆ ಸೇವೆ ಪರಿಗಣಿಸಿ ಪಕ್ಷದ ಮುಖಂಡರು ಜುಬೇದಾ ಅವರನ್ನೇ ಮತ್ತೊಮ್ಮೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೂ ಅಚ್ಚರಿ ಇಲ್ಲ.
ಸುರಯ್ಯಭಾನು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಬಿಸಿಎಂ ಎ ಮಹಿಳೆ ಮೀಸಲಾತಿ ಅಭ್ಯರ್ಥಿಗಳು ಇಲ್ಲದಿರುವುದರಿಂದ ಇವರಿಬ್ಬರಿಗೇ ಅದೃಷ್ಟ ಮತ್ತೊಮ್ಮೆ ಒಲಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net