ಮೈಸೂರಿನಲ್ಲಿ ಗಮನ ಸೆಳೆದ ಗಡ್ಡೆ, ಗೆಣಸು ಮೇಳ

8
Published on

ಮೈಸೂರು: ಗಡ್ಡೆ, ಗೆಣಸುಗಳು ನಮ್ಮ ನಿಸರ್ಗದ ಅಮೂಲ್ಯ ಸಂಪತ್ತು. ಅನ್ನ ಸಂಸ್ಕೃತಿಯ ರಾಯಭಾರಿ. ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಗೆ ಗಡ್ಡೆ, ಗೆಣಸುಗಳನ್ನು ಬಳಸುವ ಅಗತ್ಯವಿದೆ ಎಂದು ಮೈಸೂರು ಪಶ್ಚಿಮ ರೋಟರಿ ಕ್ಲಬ್ ಅಧ್ಯಕ್ಷ ಜಿ.ಕೆ.ಸುಧೀಂದ್ರ ಆಭಿಪ್ರಾಯಪಟ್ಟರು.
ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಸಹಯೋಗದಲ್ಲಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರದಿಂದ ಆರಂಭಗೊಂಡ ಎರಡು ದಿನಗಳ ಗಡ್ಡೆ, ಗೆಣಸು ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಊಟದಿಂದಲೇ ಆರೋಗ್ಯ ಕಾಪಾಡಿಕೊಂಡಿದ್ದರು. ಅವರು ಸೇವಿಸುತ್ತಿದ್ದ ಗಡ್ಡೆ ಗೆಣಸುಗಳೇ ಇದಕ್ಕೆ ಕಾರಣ. ಊಟವೇ ಆಹಾರವಾಗಿತ್ತು. ಆದರೆ, ಈಗ ಔಷಧಗಳೇ ಊಟವಾಗಿ ಪರಿಣಮಿಸಿದ್ದು ಇದಕ್ಕೆ ಪರಿಹಾರವಾಗಿ ಮತ್ತೆ ನಮ್ಮ ಊಟದ ತಟ್ಟೆಗೆ ಕಂದಮೂಲಗಳನ್ನು ತರಬೇಕಿದೆ ಎಂದು ಹೇಳಿದರು.
ಆಗಾಗ್ಗೆ ಮೇಳಗಳನ್ನು ಆಯೋಜಿಸುವುದರ ಜತೆಗೆ, ನಿಗದಿತವಾಗಿ ತಿಂಗಳಿಗೆ ಒಮ್ಮೆ ರೈತರ ಸಂತೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಸಹಜ ಸಮೃದ್ಧ ಸಹಯೋಗದಲ್ಲಿ ರೋಟರಿ ಕ್ಲಬ್ ಇದಕ್ಕಾಗಿ ಯೋಜನೆ ರೂಪಿಸಲು ಮುಂದಾಗಿದೆ ಎಂದು ತಿಳಿಸಿದರು.
ಕೇರಳದ ಗಡ್ಡೆ, ಗೆಣಸು ತಳಿ ಸಂರಕ್ಷಕ ಎನ್.ಎಂ.ಶಾಜಿ ಮಾತನಾಡಿ, ಮುಂದಿನ ಪೀಳಿಗೆಗೆ ಕಂದಮೂಲಗಳನ್ನು ಪರಿಚಯಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಮೇಳದ ಪ್ರಯೋಜನವನ್ನು ನಗರಗಳ ಜನರು ಪಡೆಯಬೇಕು ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ಎಲ್.ನಾಗೇಶ್ ಮಾತನಾಡಿ, ನಗರವಾಸಿಗಳಲ್ಲಿ ಆರೋಗ್ಯ ಜಾಗೃತಿ ಹೆಚ್ಚುತ್ತಿದ್ದು, ಇದಕ್ಕೆ ಪೂರಕವಾಗಿ ಅಡುಗೆಗೆ ಗಡ್ಡೆ ಗೆಣಸುಗಳನ್ನು ಬಳಸುವ ಪರಿಪಾಠ ಹೆಚ್ಚಬೇಕು ಎಂದು ಹೇಳಿದರು.
ಪರಿಸರ ಕಾರ್ಯಕರ್ತ ಬಾಲಚಂದ್ರ ಹೆಗಡೆ ಸಾಯಿಮನೆ ಮಾತನಾಡಿ, ರೈತಸ್ನೇಹಿ ಬೆಳೆಯಾಗಿರುವ ಗಡ್ಡೆ-ಗೆಣಸುಗಳು ಇಳುವರಿ ಮಿತಿಯನ್ನು ಮೀರಿ ಉತ್ಪನ್ನ ಕೊಡುತ್ತವೆ. ಆಧುನಿಕ ತಿನಿಸುಗಳ ಭರಾಟೆಯಲ್ಲಿ ಮರೆತೇ ಹೋಗಿರುವ ಕಂದಮೂಲಗಳ ಮೌಲ್ಯವರ್ಧನೆಗೆ ಇನ್ನಷ್ಟು ಪ್ರಯತ್ನಗಳು ನಡೆಯಬೇಕು ಎಂದರು.
ಸಹಜ ಸಮೃದ್ಧಿ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಮಾತನಾಡಿ, ನಮ್ಮ ಊಟದ ತಟ್ಟೆಯನ್ನು ವೈವಿಧ್ಯಗೊಳಿಸುವ ತರಕಾರಿಗಳ ಸಾಲಿನಲ್ಲಿ ಗಡ್ಡೆ-ಗೆಣಸುಗಳಿಗೆ ವಿಶೇಷ ಸ್ಥಾನವಿದೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಗಡ್ಡೆ-ಗೆಣಸುಗಳಿಗೆ ಇನ್ನಷ್ಟು ಆದ್ಯತೆ ಕೊಡಬೇಕಿದೆ. ಸರ್ಕಾರ ಗಡ್ಡೆ-ಗೆಣಸುಗಳನ್ನು ಜನಪ್ರಿಯಗೊಳಿಸಲು ವಿಶೇಷ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಕೃಷಿಕರು ಮತ್ತು ಗ್ರಾಹಕರಿಗೆ ಗಡ್ಡೆ-ಗೆಣಸುಗಳ ಪರಿಚಯ ಮಾಡಲು ಪ್ರತಿ ವರ್ಷ ಮೇಳ ಆಯೋಜಿಸುತ್ತಿದ್ದೇವೆ. ಈ ಮೂಲಕ ನಮ್ಮ ಹಿರಿಯರು ಕಂಡುಕೊಂಡಿದ್ದ ಆಹಾರ ಪದ್ಧತಿಗೆ ಆಧುನಿಕ ಜನರು ಮರಳಬೇಕಾಗಿದ್ದು, ಆಹಾರ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಇದೇ ವೇಳೆ ವೈವಿಧ್ಯ ಆಹಾರಗಳ ಬುಟ್ಟಿಯನ್ನು ಅನಾವರಣಗೊಳಿಸಲಾಯಿತು. ಮಚ್ಚೂರು ಹಾಡಿಯ ರೈತ ಮಹಿಳೆ ಪಾರ್ವತಿ, ಸಹಜ ಸಮೃದ್ಧದ ಅನಿತಾ ರೆಡ್ಡಿ, ಆನಂದತೀರ್ಥ ಪ್ಯಾಟಿ, ಸೀಮಾ ಪ್ರಸಾದ್, ಮಂಜುನಾಥ್, ಈಶ್ವರಪ್ಪ ಅಂಗಡಿ, ನಿಶಾಂತ ಬಂಕಾಪೂರ, ಶ್ರೀನಿವಾಸ್ ಇದ್ದರು.

ಸಾಧಕರಿಗೆ ಸನ್ಮಾನ
300ಕ್ಕೂ ಹೆಚ್ಚಿನ ಗಡ್ಡೆ ಗೆಣಸುಗಳನ್ನು ಸಂರಕ್ಷಿಸಿರುವ ಕೇರಳದ ವಯನಾಡಿನ ಎನ್.ಎಂ. ಶಾಜಿ, ಉತ್ತರ ಕರ್ನಾಟಕದ ಒಣಭೂಮಿಯಲ್ಲೂ ಗೆಣಸಿನ ಕೃಷಿ ಮಾಡಿ ಗೆದ್ದ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಮುಗಳಿ ಗ್ರಾಮದ ನಾಗರಾಜು ಹುಲಗೂರ, ದಶಕದಲ್ಲಿ ಜೊಯಿಡಾದಲ್ಲಿ ಮೇಳಗಳನ್ನು ಏರ್ಪಡಿಸಿ ಗಡ್ಡೆೆ ಗೆಣಸುಗಳನ್ನು ಮುಖ್ಯವಾಹಿನಿಗೆ ತರಲು ಸಹಕರಿಸಿದ ಬಾಲಚಂದ್ರ ಹೆಗಡೆ ಸಾಯಿಮನೆ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net