

ಮೈಸೂರು: ಸಂಕ್ರಾಂತಿ ಹಬ್ಬದ ಮುನ್ನ ದಿನವಾದ ಭಾನುವಾರವೇ ತಾಲೂಕಿನ ಸಿದ್ದಲಿಂಗಪುರದಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವ ಸಾಂಪ್ರದಾಯಿಕ ಆಚರಣೆ ನಡೆಯಿತು.
ಈ ಬಾರಿ ಸಂಕ್ರಾಂತಿ ಹಬ್ಬ ಸೋಮವಾರ ಬಂದಿರುವ ಕಾರಣ ಒಂದು ದಿನ ಮುಂಚಿವಾಗಿಯೇ ರಾಸುಗಳಿಗೆ ಕಿಚ್ಚು ಹಾರಿಸಲಾಯಿತು. ಧಗಧಗನೆ ಉರಿಯೋ ಬೆಂಕಿಯ ಉಂಡೆಯನ್ನೇ ಸೀಳಿ ಬಂದ ರಾಸುಗಳು, ಮೈನವಿರೇಳಿಸೋ ದೃಶ್ಯಗಳನ್ನು ಜನರು ಕಣ್ತುಂಬಿಕೊಂಡರು.
ಇದನ್ನು ನೋಡಲು ಇಲ್ಲಿಯ ಜನರು ಕಿಕ್ಕಿರಿದು ಸೇರಿದ್ದರು. ಸೂರ್ಯ ಅಸ್ತಂಗತವಾಗುತ್ತಿದ್ದಂತೆ ರಸ್ತೆಯ ಮೇಲೆ ಬೆಂಕಿ ಮೇಲೆದ್ದಿತು. ಸಿಂಗಾರಗೊಂಡು ಸರದಿಗಾಗಿ ಎದುರು ನೋಡುತ್ತಿದ್ದ ರಾಸುಗಳು ಕಿಚ್ಚು ಹಾಯುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಗಾರ ಮುಗಿಲುಮುಟ್ಟಿತು.
ಸುಗ್ಗಿಯ ಸಂಭ್ರಮವನ್ನು ಜಾನುವಾರುಗಳೊಂದಿಗೆ ಆಚರಿಸುವ ಸಂಪ್ರದಾಯವನ್ನು ಸಿದ್ದಲಿಂಗಪುರದ ರೈತರು ಅಂದಾಜು 70 ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ. ಮೈತೊಳೆದು ಶುಚಿಗೊಳಿಸಿದ ರಾಸುಗಳ ಕೋಡುಗಳಿಗೆ ಬಣ್ಣಬಳಿದು ಅಂದ ಹೆಚ್ಚಿಸಿದರು. ಕೊರಳಿಗೆ, ದೇಹಕ್ಕೆ ಹೂವಿನ ಮಾಲೆಗಳಿಂದ ಅಲಂಕರಿಸಿ ಬಲೂನುಗಳನ್ನು ಕಟ್ಟಿದರು.