

ಮೈಸೂರು: ಕರೊನಾ ಭೀತಿಯ ನಡುವೆ ಈ ಬಾರಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆ ಶೇ.67.98 ಫಲಿತಾಂಶದೊಂದಿಗೆ ಮತ್ತೆ 15ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ.0.57ರಷ್ಟು ಫಲಿತಾಂಶದಲ್ಲಿ ಕುಸಿತ ಕಂಡಿದೆ.
ಜಿಲ್ಲೆಯಲ್ಲಿ ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 16,786 ಬಾಲಕರು, 17,525 ಬಾಲಕಿಯರು ಸೇರಿದಂತೆ 34,311 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಈ ಪೈಕಿ 8,743 ಬಾಲಕರು (ಶೇ.52.09) ಹಾಗೂ 12,084 ಬಾಲಕಿಯರು (ಶೇ.68.95) ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶ: ಕಲಾ ವಿಭಾಗದಲ್ಲಿ 9,422 ವಿದ್ಯಾರ್ಥಿಗಳ ಪೈಕಿ 3,456 (ಶೇ.36.68), ವಾಣಿಜ್ಯ ವಿಭಾಗದಲ್ಲಿ 13,365 ವಿದ್ಯಾರ್ಥಿಗಳ ಪೈಕಿ 8,585 (ಶೇ.64.23), ವಿಜ್ಞಾನ ವಿಭಾಗದಲ್ಲಿ 11,524 ವಿದ್ಯಾರ್ಥಿಗಳ ಪೈಕಿ 8,786 (ಶೇ.76.24) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಈ ಬಾರಿ ವಿಜ್ಞಾನ ವಿಭಾಗ ಹೆಚ್ಚಿನ ಫಲಿತಾಂಶ ಪಡೆದುಕೊಂಡಿದೆ.
ಹಿಂದುಳಿದ ಗ್ರಾಮೀಣ ಮಕ್ಕಳು: ಫಲಿತಾಂಶದಲ್ಲಿ ಈ ಬಾರಿ ನಗರ ಪ್ರದೇಶದ ಮಕ್ಕಳು ಮುಂದಿದ್ದು, ಗ್ರಾಮೀಣ ಪ್ರದೇಶದ ಮಕ್ಕಳು ಹಿಂದುಳಿದಿದ್ದಾರೆ. ಸಾಮಾನ್ಯ ವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಕ್ಕಳು ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿರುತ್ತಾರೆ. ಈ ಬಾರಿ ಕಲಾ ವಿಭಾಗದ ಫಲಿತಾಂಶ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಇದಕ್ಕೆ ಒಂದು ಕಾರಣವಾಗಿರಬಹುದು. ನಗರ ಪ್ರದೇಶದಲ್ಲಿ 29,207 ವಿದ್ಯಾರ್ಥಿ ಗಳು ಪರೀಕ್ಷೆ ಎದುರಿಸಿ 18,370 ವಿದ್ಯಾರ್ಥಿಗಳು (ಶೆ.62.09) ತೇರ್ಗಡೆ ಹೊಂದಿದ್ದಾರೆ. ಅದೇ ರೀತಿ ಗ್ರಾಮೀಣ ಭಾಗದಲ್ಲಿ 5,104 ವಿದ್ಯಾರ್ಥಿಗಳ ಪೈಕಿ 2,457 ವಿದ್ಯಾರ್ಥಿಗಳು (ಶೆ.48.14) ಉತ್ತೀರ್ಣರಾಗಿದ್ದಾರೆ.
ಮಾಧ್ಯಮ, ವರ್ಗವಾರು ಫಲಿತಾಂಶ: ಆಂಗ್ಲ ಮಾಧ್ಯಮದ 19,821 ವಿದ್ಯಾರ್ಥಿಗಳ ಪೈಕಿ 14,259 ವಿದ್ಯಾರ್ಥಿಗಳು (ಶೇ.71.94), ಕನ್ನಡ ಮಾಧ್ಯಮ ವಿಭಾಗದ 14,490 ವಿದ್ಯಾರ್ಥಿಗಳ ಪೈಕಿ 6,568 (ಶೇ.45.33) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 7,071 ಎಸ್ಸಿ ವಿದ್ಯಾರ್ಥಿಗಳ ಪೈಕಿ 3,570 (ಶೇ.50.49), 3,185 ಎಸ್ಟಿ ವಿದ್ಯಾರ್ಥಿಗಳ ಪೈಕಿ 1,724 (ಶೇ.54.13), ಪ್ರವರ್ಗ-1ರ 1,386 ವಿದ್ಯಾರ್ಥಿಗಳ ಪೈಕಿ 834 (ಶೇ.60.17), ಪ್ರವರ್ಗ 2ಎಗೆ ಸೇರಿದ 7,143 ವಿದ್ಯಾರ್ಥಿಗಳ ಪೈಕಿ 4,256 (ಶೇ.59.58), ಪ್ರವರ್ಗ 2ಬಿ ಗೆ ಸೇರಿದ 2,991 ವಿದ್ಯಾರ್ಥಿಗಳ ಪೈಕಿ 1,824 (ಶೇ.60.98), ಪ್ರವರ್ಗ-3ಎ ಗೆ ಸೇರಿದ 5,401 ವಿದ್ಯಾರ್ಥಿಗಳ ಪೈಕಿ 3,635 (ಶೇ.67.03), ಪ್ರವರ್ಗ-3ಬಿ ಗೆ ಸೇರಿದ 4,771 ವಿದ್ಯಾರ್ಥಿಗಳ ಪೈಕಿ 3,127 (ಶೇ.65.54), ಇತರ ವರ್ಗದ 2,363 ವಿದ್ಯಾರ್ಥಿಗಳ ಪೈಕಿ 1,857 (ಶೇ.78.59) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.