ಮುಧೋಳ ತಾಲೂಕಿನಲ್ಲಿ ಘಟಪ್ರಭೆ ಅಬ್ಬರ

In Mudhol taluk there is a lot of chaos
ಮುಧೋಳ ತಾಲೂಕಿನ ಮಿರ್ಜಿ ಗ್ರಾಮಕ್ಕೆ ಜಮಖಂಡಿ ಎಸಿ ಶ್ವೇತಾ ಬೀಡಿಕರ ಹಾಗೂ ತಹಸೀಲ್ದಾರ್ ವಿನೋದ ಹತ್ತಳ್ಳಿ,ಪ್ರಕಾಶ ಕುಂದರಗಿ, ತಿಮ್ಮಣ್ಣ ಮೀಶಿ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು.
Published on

ಮುಧೋಳ: ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಅಪಾರ ಮಳೆಯಾಗುತ್ತಿರುವುದರಿಂದ ಹಿಡಕಲ್ ಜಲಾಶಯದಿಂದ ಅಧಿಕ ನೀರು ನದಿಗೆ ಬಿಡಲಾಗಿದೆ. ಶನಿವಾರ ಬೆಳಗ್ಗೆ ವೇಳೆಗೆ ಮುಧೋಳ-ಯಾದವಾಡ ಸೇತುವೆ ಬಂದ್ ಆಗುವ ಸಾಧ್ಯತೆ ಇದೆ.

ನದಿ ಪಾತ್ರದಲ್ಲಿರುವ ತಾಲೂಕಿನ ಜಮೀನುಗಳಿಗೆ ನೀರು ನುಗ್ಗಿದೆ. ಗ್ರಾಮಗಳಿಗೂ ನೀರು ಬರುವ ಸಾಧ್ಯತೆ ಇದೆ. ಶುಕ್ರವಾರ ಸಂಜೆ 5ರವರೆಗೆ ಹಿಡಕಲ್ ಜಲಾಶಯದಿಂದ 40 ಸಾವಿರ, ಹಿರಣ್ಯಕೇಶಿಯಿಂದ 22,840, ಮಾರ್ಖಂಡೆಯದಿಂದ 7380, ಬಳ್ಳಾರಿ ನಾಲಾದಿಂದ 2980 ಕ್ಯೂಸೆಕ್ ಸೇರಿ ಘಟಪ್ರಭೆಗೆ 73,200 ಕ್ಯೂಸೆಕ್ ನೀರು ಬಿಡಲಾಗಿದೆ. ಇಪ್ಪತ್ತಕ್ಕೂ ಅಧಿಕ ಗ್ರಾಮಗಳ ಕೊಂಡಿಯಾದ ಯಾದವಾಡ-ಮುಧೋಳ ಸೇತುವೆ ಶನಿವಾರ ಬೆಳಗ್ಗೆ ಸ್ಥಗಿತಗೊಳ್ಳಲಿದೆ.

ಜಾಲಿಬೇರ, ರೂಗಿ, ಮೆಟಗುಡ್ಡ, ಹಲಕಿ, ನಿಂಗಾಪುರ, ಗುಲಗಾಲಜಂಬಗಿ, ಯಾದವಾಡ, ಉತ್ತೂರ, ರಂಜಣಗಿ, ಚನ್ನಾಳ, ಮಿರ್ಜಿ, ಮಲ್ಲಾಪುರ ಸೇರಿ ಇತರ ಗ್ರಾಮಗಳಿಗೆ ಮುಧೋಳ ನಗರದ ಸಂಪರ್ಕ ಕಡಿತಗೊಳ್ಳಲಿದೆ. ಒಂದು ವೇಳೆ ಮುಧೋಳಕ್ಕೆ ಬರಲೇಬೇಕಾದರೆ ಇಪ್ಪತ್ತು ಕಿ.ಮೀ. ಸುತ್ತುವರಿದು ಬರಬೇಕಾಗುತ್ತದೆ.

ನದಿ ದಡದ ಮಿರ್ಜಿ ಗ್ರಾಮಕ್ಕೆ ನೀರು ಸಮೀಪಿಸುತ್ತಿದೆ. ತಾಲೂಕು ಆಡಳಿತ ಮುಂಜಾಗ್ರತೆಯಾಗಿ ಕಾಳಜಿ ಕೇಂದ್ರ ತೆರೆದಿದೆ. ಗುರುವಾರ ರಾತ್ರಿ ಆರು ಕುಟುಂಬದ ಸದಸ್ಯರು ಹಾಗೂ ಜಾನುವಾರು ಸ್ಥಳಾಂತರಿಸಲಾಗಿದೆ. ನದಿ ಪಾತ್ರದ ಗ್ರಾಮದ ಜನರು ಸುರಕ್ಷಿತ ಸ್ಥಳಗಳಿಗೆ ಸ್ವಯಂ ಪ್ರೇರಣೆಯಿಂದ ಸ್ಥಳಾಂತರಗೊಳ್ಳಲು ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ವಿನಂತಿಸಿದ್ದಾರೆ.

ಜಮಖಂಡಿ ಎಸಿ ಶ್ವೇತಾ ಬಿಡೀಕರ ಹಾಗೂ ತಹಸೀಲ್ದಾರ್ ವಿನೋದ ಹತ್ತಳ್ಳಿ, ಪ್ರಕಾಶ ಕುಂದರಗಿ, ತಿಮ್ಮಣ್ಣ ಮೀಶಿ ಸೇರಿದಂತೆ ಅಧಿಕಾರಿಗಳ ತಂಡ ಮಿರ್ಜಿ ಗ್ರಾಮಕ್ಕೆ ಭೇಟಿ ನೀಡಿ ಕಾಳಜಿ ಕೇಂದ್ರದ ಬಗ್ಗೆ ಮಾಹಿತಿ ಪಡೆದರು.

ಶನಿವಾರ ಸಂಜೆ 4 ಗಂಟೆಗೆ ತಾಲೂಕು ಆಡಳಿತ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಮುಧೋಳ ಶಾಸಕ ಆರ್.ಬಿ.ತಿಮ್ಮಾಪೂರ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net