ಸಮಸ್ಯೆಗಳ ಸುಳಿಯಲ್ಲಿ ಹುಲೇಗುಡ್ಡ

17 YLB 01
ಯಲಬುರ್ಗಾ ತಾಲೂಕಿನ ಹುಲೇಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದೆ ಹರಿಯುತ್ತಿರುವ ಕೊಳಚೆ.
Published on

ಯಲಬುರ್ಗಾ: ಆಮೆಗತಿಯಲ್ಲಿ ಸಾಗಿದ ಶಾಲಾ ಕಟ್ಟಡ ಕಾಮಗಾರಿ, ಎಲ್ಲೆಂದರಲ್ಲಿ ಹರಿಯುವ ಚರಂಡಿ ನೀರು, ವಿಲೇವಾರಿ ಆಗದ ತ್ಯಾಜ್ಯ, ಸ್ಥಗಿತಗೊಂಡ ಆರ್‌ಒ ಪ್ಲಾಂಟ್...

ಇದು ತಾಲೂಕು ಕೇಂದ್ರದಿಂದ 15 ಕಿ.ಮೀ.ದೂರದಲ್ಲಿರುವ ಹುಲೇಗುಡ್ಡ ಗ್ರಾಮದ ಸಮಸ್ಯೆ. ಗೆದಗೇರಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಈ ಹಳ್ಳಿಯಲ್ಲಿ 1,850ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಗ್ರಾಮದ ಓಣಿಗಳ ಬಹುತೇಕ ಕಡೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಕೊಳಚೆ ಹರಿಯುತ್ತಿದ್ದು, ಮಕ್ಕಳು ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಗ್ರಾಮದ ಮುಖ್ಯ ಚರಂಡಿ ತ್ಯಾಜ್ಯ ತುಂಬಿಕೊಂಡಿದೆ. ಪ್ರಮುಖ ರಸ್ತೆ ಹಾಳಾಗಿದ್ದು, ಎಲ್ಲೆಂದರಲ್ಲಿ ತಗ್ಗುದಿನ್ನೆ ಬಿದ್ದಿವೆ. ಇದರಿಂದ ಗ್ರಾಮದಲ್ಲಿ ಕಲುಷಿತ ವಾತಾವರಣ ನಿರ್ಮಾಣಗೊಂಡಿದೆ. ಸೊಳ್ಳೆಗಳ ಉತ್ಪತ್ತಿಯಿಂದ ನಿವಾಸಿಗಳು ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಆರ್‌ಒ ಪ್ಲಾಂಟ್ ಸ್ಥಗಿತ: ನಿವಾಸಿಗಳಿಗೆ ಶುದ್ಧ ಕುಡಿವ ನೀರು ಒದಗಿಸಲು ಸ್ಥಾಪಿಸಲಾದ ಆರ್‌ಒ ಪ್ಲಾಂಟ್ ಸ್ಥಗಿತಗೊಂಡಿದೆ. ಘಟಕದ ದುರಸ್ತಿ ಕೈಗೊಂಡು ಸಾರ್ವಜನಿಕರಿಗೆ ಶುದ್ಧ ನೀರು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಎಲ್‌ಕೆಜಿ, ಯುಕೆಜಿ ಹಾಗೂ 1 ರಿಂದ 7ನೇ ತರಗತಿ ವರೆಗೆ ಇರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 453 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಶಿಕ್ಷಣ ಇಲಾಖೆ ಮಕ್ಕಳಲ್ಲಿ ಅಕ್ಷರದ ಜಾಗೃತಿ ಮೂಡಿಸುತ್ತಿದೆ. ಶಿಕ್ಷಣಕ್ಕೆ ಮಕ್ಕಳ ಪ್ರತಿಯೊಬ್ಬ ಪಾಲಕರು ಆದ್ಯತೆ ನೀಡಿದ್ದು, ಇಂಥ ಸಣ್ಣ ಹಳ್ಳಿಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿರುವುದು ಸಂತಸದ ವಿಷಯ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲಾ ಆವರಣದಲ್ಲಿ ಹೆಚ್ಚುವರಿಯಾಗಿ ಕೆಕೆಆರ್‌ಡಿಬಿಯಿಂದ ಎರಡು ಕೊಠಡಿ ಮಂಜೂರು ಆಗಿದ್ದು, ಅವುಗಳ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ನಿಗದಿತ ಸಮಯಕ್ಕೆ ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸಬೇಕು ಎನ್ನವುದು ಶಿಕ್ಷಣ ಪ್ರೇಮಿಗಳ ಆಶಯ.

ಇನ್ನು ಶಾಲಾ ಆವರಣದಲ್ಲಿ ಗ್ರಾಪಂನಿಂದ ನರೇಗಾ ಯೋಜನೆಯಡಿ ಅಂದಾಜು 4 ಲಕ್ಷ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳಿಗಾಗಿ ಹೈಟೆಕ್ ಶೌಚಗೃಹ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ. ಮಕ್ಕಳು ಕುಳಿತುಕೊಂಡು ಬಿಸಿಯೂಟ ಸವಿಯಲು ಭೋಜನಾಯಲದ ಅವಶ್ಯವಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಶೌಚಗೃಹ ವ್ಯವಸ್ಥೆಯಾಗಬೇಕಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ಸಲುವಾಗಿ ಶಾಲಾ ಕಾಂಪೌಂಡ್ ಗೋಡೆ ಇನ್ನಷ್ಟು ಎತ್ತರಕ್ಕೆ ಏರಿಸಬೇಕು ಎಂದು ಸಹಿಪ್ರಾ ಶಾಲಾ ಮುಖ್ಯಶಿಕ್ಷಕ ವೀರಪ್ಪ ಗಾಣಿಗೇರ್ ತಿಳಿಸಿದರು.

ಗ್ರಾಪಂನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವಷರ್ ಗ್ರಾಮದ ಮೂರು ಕಡೆಯಲ್ಲಿ ಅಂದಾಜು 9 ಲಕ್ಷ ರೂ. ವೆಚ್ಚದಲ್ಲಿ ನಾಲಾ ಸುಧಾರಣೆ ಕಾಮಗಾರಿ ಕೈಗೊಂಡು ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಅಂತರ್ಜಲ ಮಟ್ಟ ಸುಧಾರಣೆಗೆ ನರೇಗಾದಡಿ ನಾನಾ ಕಾಮಗಾರಿ ನಡೆಸಲಾಗಿದೆ. ರೈತರ ಜಮೀನಲ್ಲಿ ಕಂದಕ ಬದು, 5 ದನದದೊಡ್ಡಿ ನಿರ್ಮಾಣಗೊಂಡಿವೆ. 2025-26ನೇ ಸಾಲಿಗೆ ನರೇಗಾದಡಿ ನಾನಾ ಕಾಮಗಾರಿ ಆರಂಭಿಸಿ ಕೂಲಿಕಾರರಿಗೆ ಕೆಲಸ ನೀಡಲು ಗ್ರಾಪಂ ಕ್ರಿಯಾಯೋಜನೆ ರೂಪಿಸಿದೆ.

ಹುಲೇಗುಡ್ಡದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ನರೇಗಾ ಯೋಜನೆಯಡಿ ಕಳೆದ ಸಲ ನಾಲಾ ಸುಧಾರಣೆ ಕಾಮಗಾರಿ ನಡೆಸಿ, ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಆರ್‌ಒ ಪ್ಲಾಂಟ್ ದುರಸ್ತಿಗೆ ಕ್ರಮ ವಹಿಸಲಾಗುವುದು. 2025-26ನೇ ಸಾಲಿನ ನರೇಗಾದಡಿ ನಾನಾ ಕಾಮಗಾರಿ ನಡೆಸಿ ಕೂಲಿಕಾರರಿಗೆ ಕೆಲಸ ಒದಗಿಸಲಾಗುವುದು.

ದೊಡ್ಡಪ್ಪ

ಪಿಡಿಒ, ಗ್ರಾಮ ಪಂಚಾಯತಿ ಗೆದಗೇರಿ.

==

ಹುಲೇಗುಡ್ಡ ಗ್ರಾಮದಲ್ಲಿ ಚರಂಡಿ ನೀರು ಎಲ್ಲೆಂದರಲ್ಲಿ ರಸ್ತೆ ಮೇಲೆ ಹರಿಯುತ್ತಿದೆ. ಶುದ್ಧ ಕುಡಿವ ನೀರಿನ ಘಟಕ ಸ್ಥಗಿತಗೊಂಡಿದೆ. ಗ್ರಾಪಂ ಆಡಳಿತ ನೈರ್ಮಲೀಕರಣಕ್ಕೆ ಒತ್ತು ನೀಡುತ್ತಿಲ್ಲ. ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಮಂಜುನಾಥ ಕಲ್ಲೂರು

ಹುಲೇಗುಡ್ಡ ಗ್ರಾಮಸ್ಥ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net