

ಹುಬ್ಬಳ್ಳಿ : ಧರ್ಮವನ್ನು ಗ್ರಂಥಗಳನ್ನು ಓದಿದರೆ, ಅರಿತುಕೊಂಡರೆ ಸಾಲದು. ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪನ್ಯಾಸಕಿ ರಾಜಶ್ರೀ ಕುಸನಾಳೆ ಹೇಳಿದರು.
ಇಲ್ಲಿನ ಶಾಂತಿನಾಥ ಭವನದಲ್ಲಿ ಹುಬ್ಬಳ್ಳಿ ದಿಗಂಬರ ಜೈನ ಸಮಾಜದಿಂದ ಸೋಮವಾರ ಆಯೋಜಿಸಿದ್ದ 20ನೇ ಶತಮಾನದ ಪ್ರಥಮ ದಿಗಂಬರ ಆಚಾರ್ಯ ಶ್ರೀ ಶಾಂತಿ ಸಾಗರ ಮಹಾರಾಜರ 70ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಹಿಂಸೆ, ಸತ್ಯ, ಸಂಯಮ, ಶೀಲ, ಚಾರಿತ್ರ, ಪ್ರಾಮಾಣಿಕತೆಯಂತಹ ಸದ್ಗುಣಗಳೇ ಧರ್ಮದ ಲಕ್ಷಣಗಳು. ಇವು ಪ್ರತಿಯೊಬ್ಬ ಮನುಷ್ಯನ ನಿತ್ಯ ಜೀವನದಲ್ಲಿ ಅಳವಡಿಕೆಯಾಗಬೇಕು. ಹಾಗಾದಲ್ಲಿ ಮಾತ್ರ, ವ್ಯಕ್ತಿಯ, ಪರಿವಾರದ, ಸಮಾಜದ, ದೇಶದ ಹಾಗೂ ಜಗದ ಕಲ್ಯಾಣಗಳು ಸಾಧ್ಯವೆಂಬುದು ಆಚಾರ್ಯ ಶಾಂತಿಸಾಗರರ ಸಂದೇಶವಾಗಿತ್ತು ಎಂದು ತಿಳಿಸಿದರು.
ದಿಗಂಬರ ಮುನಿ ಪರಂಪರೆಯು ಲುಪ್ತವಾಗಿ ಹೋಯಿತು ಎನ್ನುವ ಸಂದರ್ಭದಲ್ಲಿ ದಿಗಂಬರ ಮುನಿ ದೀಕ್ಷೆ ಪಡೆದ ಆಚಾರ್ಯ ಶ್ರೀ ಶಾಂತಿ ಸಾಗರರು, ದೇಶಾದ್ಯಂತ ವಿಹಾರ ಮಾಡಿ ದಿಗಂಬರ ಪರಂಪರೆಗೆ ಪುನರ್ಜೀವನ ನೀಡುವ ಮೂಲಕ ಮುನಿಕುಲ ಪಿತಾಮಹ ಎನಿಸಿದರು. ಅವರ ಕಾರಣದಿಂದ ದೇಶಾದ್ಯಂತ ಇಂದು ಸಹಸ್ರಾರು ದಿಗಂಬರ ಮುನಿಗಳು ಕಂಡು ಬರುತ್ತಾರೆ ಎಂದು ಹೇಳಿದರು.
ಪ್ರಾತಃ ಕಾಲ ಶಾಂತಿನಾಥ ಬಸದಿಯಲ್ಲಿ ಜಿನಪ್ರತಿಮೆಗೆ ವಿಶೇಷ ಪಂಚಾಮೃತ ಅಭಿಷೇಕ ನಡೆಯಿತು, ಆಚಾರ್ಯ ಶ್ರೀ ಶಾಂತಿಸಾಗರರ ಭಾವಚಿತ್ರದ ಎದುರು ಅಷ್ಟ ದ್ರವ್ಯಗಳಿಂದ ಅಷ್ಟಕ ಪೂಜೆ, ಭಕ್ತಿ, ಆರತಿ, ಪುಷ್ಪ ಸಮರ್ಪಣೆ ಹಾಗೂ ಜಯ ಘೋಷ ಮಾಡಲಾಯಿತು. ತವನಪ್ಪ ಪಂಡಿತ ವಿಧಿ ವಿಧಾನ ನೆರವೇರಿಸಿದರು.
ಸಮಾಜದ ಅಧ್ಯಕ್ಷ ರಾಜೇಂದ್ರ ಬಿಳಗಿ ಅಧ್ಯಕ್ಷತೆ ವಹಿಸಿದ್ದರು. ಶ್ರೇಣಿಕರಾಜ್ ರಾಜಮಾನೆ, ಶಾಂತಿನಾಥ ಹೋತಪೇಟಿ, ಸುಹಾಸ ಜವಳಿ, ಮದನಕುಮಾರ ದಂಡಾವತಿ, ವಿನಯ ಜವಳಿ, ತವನಪ್ಪ ಶಿರಗುಪ್ಪಿ, ಸಂತೋಷ ಗೊಂಗಡಿ, ಮನ್ಮಥ ಕ್ಯಾಸಾ, ಕುಬೇರ ಪ್ರಥಮಶೆಟ್ಟಿ, ಬ್ರಹ್ಮಕುಮಾರ ಬೀಳಗಿ, ಮಹಾವೀರ ಬೀಳಗಿ, ಮಹಾವೀರ ದಿನಕರ, ಸುಜಾತಾ ಗುಗ್ಗರಿ, ಸುನಂದಾ ಗೋಟಡಿಕೆ, ವಿಜಯಲಕ್ಷಿ ಗೊಂಗಡಿ, ನಿವೇದಿತಾ ಜವಳಿ, ಚೇಳನಾ ರಾಜಮಾನೆ, ಮನ್ಮಥ ಕ್ಯಾಸಾ, ಪದ್ಮರಾಜ ದಂಡಾವತಿ, ವಸಂತ ಅಂಗಡಿ ಮಹಾವೀರ ಹಾನಗಲ್ಲ ಮತ್ತಿತರರು ಉಪಸ್ಥಿತರಿದ್ದರು.
ಆ. 28 ರಿಂದ ಹತ್ತು ದಿನಗಳ ಕಾಲ ದಶಲಕ್ಷಣ ಪರ್ವದ ಸಂಗೀತಮಯ ಪೂಜಾ ವಿಧಾನ, ಮಂಗಲ ಪ್ರವಚನಗಳು ನಡೆಯಲಿದ್ದು ನವಗ್ರಹತೀರ್ಥ, ಹೊಂಬುಜ, ನರಸಿಂಹರಾಜಪುರ, ಆರತಿಪುರ ಮತ್ತಿತರ ಜೈನ ಮಠಗಳ ಭಟ್ಟಾರಕರು ಸಾನಿಧ್ಯ ವಹಿಸುವರು.