

ಮಸ್ಕಿ: ಪಟ್ಟಣದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರೋತ್ಸವ ಕಾರ್ಯಕ್ರಮಗಳು ಶನಿವಾರ ಸಂಪನ್ನಗೊಂಡವು.
ಲಘು ರಥೋತ್ಸವ, ಸ್ವಸ್ತಿವಾಚನ, ಫಲಮಂತ್ರಾಕ್ಷತೆ ಮತ್ತು ತೊಟ್ಟಿಲು ಸೇವೆ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಿದವು.
ಮುನ್ನಾದಿನ ಸಿರಗುಪ್ಪದ ನಿವೃತ್ತ ಜೀವ ವಿಮಾ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ನಾಯಕ ಅವರ ದಾಸವಾಣಿ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. ತಬಲವಾದಕ ರಿಜವಾನ್ ಹಾಗೂ ಹಾರ್ಮೋನಿಯಂ ರಾಮಚಂದ್ರಪ್ಪ ಸಾಥ್ ನೀಡಿದರು.
ಇನ್ನೂ ಮಕ್ಕಳು, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅಷ್ಟೋತ್ತರ, ಭಜನಾ ಮತ್ತು ಅಷ್ಟಾವಧಾನ ಸೇವಾ ಕಾರ್ಯಕ್ರಮ, ವೆಂಕಟೇಶ್ವರ ಸ್ತೋತ್ರ ಪಠಣ, ಭಕ್ತಿಗೀತೆಗಳ ಸ್ಪರ್ಧೆ, ಶ್ರೀನಿವಾಸ ಕಲ್ಯಾಣೋತ್ಸವ (ಛದ್ಮವೇಷ ಸ್ಪರ್ಧೆ), ಕಳಸದ ಮೆರವಣಿಗೆ, ತುಳಸಿ ಅರ್ಚನೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ, ಅವಭೃತ ಸ್ನಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಹನುಮಂತರಾವ್ ಪಟವಾರಿ, ಹನುಮೇಶ ಕುಲಕರ್ಣಿ, ಗುಂಡುರಾವ್ ದೇಸಾಯಿ, ಗುರುರಾಜ ನಾಯ್ಕ, ಹನುಮಂತರಾವ್ ವೆಂಕಟಾಪುರ, ವಿನಾಯಕ ಕುಲಕರ್ಣಿ, ರಮೇಶ ಕುಲಕರ್ಣಿ, ಮೌನೇಶ ನಾಯಕ, ಲಕ್ಷ್ಮೀ ನಾರಾಯಣ ಶೆಟ್ಟಿ, ಸತ್ಯನಾರಾಯಣ ಇಲ್ಲೂರು ಇತರರಿದ್ದರು.
ಹಸ್ಮಕಲ್ ಗ್ರಾಮದಲ್ಲಿ ದೇವಿ ರಥೋತ್ಸವ: ಹಸ್ಮಕಲ್ ಗ್ರಾಮದ ಕೆರೆ ದುರ್ಗಾದೇವಿ ದೇವಸ್ಥಾನದಲ್ಲಿ ಪುರಾಣ ಮಹಾಮಂಗಲೋತ್ಸವ ಹಾಗೂ ದುರ್ಗಾದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿತು. ದೇವಸ್ಥಾನದಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು. ಬಳಿಕ ಉಚ್ಚಾಯ, ದೇವಿ ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ತದನಂತರ ದೇವಸ್ಥಾನದ ವೇದಿಕೆ ಕಾರ್ಯಕ್ರಮದಲ್ಲಿ ಪಂ.ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಸೋಮನಾಳದ ಸಿದ್ದರಾಮಯ್ಯಸ್ವಾಮಿ ಶಾಸ್ತ್ರಿ ಹಿರೇಮಠ ಅವರಿಂದ ಪುರಾಣ ಪ್ರವಚನ ಸಂಪನ್ನಗೊಂಡಿತು.
ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಮಸ್ಕಿ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಬಸವರಾಜಸ್ವಾಮಿ, ಗೋವಿಂದಪ್ಪ ನಾಯಕ ರಂಗಾಪುರ ಇತರರಿದ್ದರು.