

ವಿಜಯವಾಣಿ ಸುದ್ದಿಜಾಲ ಮಂಡ್ಯ
ಜಿಲ್ಲೆಯಲ್ಲಿ ಮತ್ತೆ 8 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 414ಕ್ಕೇರಿದೆ.
ಆರೋಗ್ಯ ಇಲಾಖೆ ಸೋಮವಾರ ಪ್ರಕಟಿಸಿದ ಹೆಲ್ತ್ ಬುಲೆಟಿನ್‌ನಲ್ಲಿ ಮದ್ದೂರು ತಾಲೂಕಿನ ನಾಲ್ವರು, ಮಳವಳ್ಳಿ ತಾಲೂಕಿನಲ್ಲಿ ಮೂವರು ಹಾಗೂ ಮಂಡ್ಯ ತಾಲೂಕಿನಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
ಯಾದಗಿರಿ ಜಿಲ್ಲೆಯಿಂದ ಮಂಡ್ಯ ತಾಲೂಕಿಗೆ ಬಂದಿರುವ ವ್ಯಕ್ತಿಗೆ, ಬೆಂಗಳೂರಿನಿಂದ ಮದ್ದೂರು ತಾಲೂಕಿಗೆ ಬಂದ ವ್ಯಕ್ತಿಗೆ ಸೋಂಕು ದೃಢವಾಗಿದೆ. ಅಂತೆಯೇ, ಪಿ-10142 ಸೋಂಕಿತ ಸಂಪರ್ಕದಲ್ಲಿದ್ದ ಮದ್ದೂರು ತಾಲೂಕಿನ ಇಬ್ಬರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಮಳವಳ್ಳಿ ತಾಲೂಕು ಮೂವರು ಹಾಗೂ ಮದ್ದೂರಿನ ಒಬ್ಬನಿಗೆ ಜ್ವರ, ನೆಗಡಿ, ಕೆಮ್ಮುವಿನಂತಹ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, ಇವರಲ್ಲಿ ಸೋಂಕು ಖಚಿತವಾಗಿದೆ.
ಜಿಲ್ಲೆಯಲ್ಲಿ ಈವರೆಗೆ 339 ಜನರು ಸೋಂಕಿನಿಂದ ಚೇತರಿಕೆಯಾಗಿದ್ದಾರೆ. ಸದ್ಯ 75 ಸಕ್ರಿಯ ಪ್ರಕರಣಗಳಿದ್ದು, ಇವರೆಲ್ಲರೂ ಮಂಡ್ಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸಿ ಭೇಟಿ, ಪರಿಶೀಲನೆ: ಕರೊನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಪ್ರದೇಶ ಹಾಗೂ ದುದ್ದ ಗ್ರಾಮಕ್ಕೆ ಸೋಮವಾರ ಡಿಸಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಸೋಂಕಿತ ವ್ಯಕ್ತಿ ಮನೆಯನ್ನು ಸಂಪೂರ್ಣ ಬೀಚಿಂಗ್ ಪೌಡರ್ ಮತ್ತು ಕ್ರಿಮಿನಾಶಕ ಔಷಧ ಬಳಸಿ ಸ್ವಚ್ಛತೆ ಮಾಡಲು ಮತ್ತು ಸೋಂಕಿತ ವ್ಯಕ್ತಿಯ ಕುಟುಂಬಸ್ಥರಿಗೆ ಉಚಿತವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೋಂಕಿತ ವ್ಯಕ್ತಿಯ ಕುಟುಂಬದವರು ಮನೆಯಿಂದ ಯಾರು ಹೊರಗೆ ಬರದಂತೆ ಸಂಪೂರ್ಣ ನಿಗಾ ವಹಿಸಲು ಮತ್ತು ಗ್ರಾಮಸ್ಥರು ತುಂಬಾ ಜಾಗರೂಕತೆಯಿಂದ ಇರುವುದರ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜತೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಮಾರ್ಗದರ್ಶನ ನೀಡಿದರು.
ಬಳಿಕ ದುದ್ದ ಮತ್ತು ಹೊಳಲು ಗ್ರಾಮದ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿ ಕಡತಗಳ ವಿಲೇ ಇತ್ಯಾದಿ ಸಂಬಂಧ ಪರಿಶೀಲನೆ ಮಾಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಮಂಡ್ಯ ತಹಸೀಲ್ದಾರ್ ನಾಗೇಶ್ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಉಪಸ್ಥಿತರಿದ್ದರು.