

ಹರಪನಹಳ್ಳಿ: ಅತಿ ಕಡಿಮೆ ಶಿಕ್ಷಣ ಪಡೆದವರು ಪ್ರತಿಭೆ ಪ್ರದರ್ಶಿಸಿ ಜಗತ್ತಿನಾದ್ಯಂತ ಹೆಸರು ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯಲ್ಲೇಶ್ ಆನಂದ್ ಕಾಳೆ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಬಾಲಕರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಕಲೆಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಉನ್ನತವಾಗಿ ಬೆಳೆಯಲು ನಿರಂತರ ಕಲಿಕೆ ಅವಶ್ಯವಾಗಿದೆ. ಶಿಕ್ಷಣವನ್ನು ಪಡೆಯುವವರು ಕಲೆಯ ಹಿಂದೆ ಓಡದೆ ಶಿಕ್ಷಣ ಮುಗಿದ ನಂತರ ಅದನ್ನು ಮುಂದುವರಿಸುವುದು ಉತ್ತಮ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಸಿದ್ದಪ್ಪ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದಿಲ್ಲೊಂದು ಕಲೆ ಅಡಕವಾಗಿರುತ್ತದೆ ಅದನ್ನು ಸದುಪಯೋಗ ಪಡಿಸಿಕೊಂಡಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಹಿರಿಯ ರಂಗಕರ್ಮಿ ಪರುಶುರಾಮ್ ಮಾತನಾಡಿ, ಕಟ್ಟಿಟ್ಟ ಬುತ್ತಿ ಎಂದಿಗೂ ಶಾಶ್ವತವಲ್ಲ ಅದು ಕ್ಷಣಿಕ ಸುಖ ನೀಡುತ್ತದೆ. ಶ್ರಮದ ಫಲದಿಂದ ದುಡಿಮೆ ಮಾಡಿದ್ದು ಎಂದಿಗೂ ನಮ್ಮೊಟ್ಟಿಗೆ ಇರುತ್ತದೆ ಎಂದರು. ನಿಲಯಪಾಲಕ ಎನ್.ಜಿ.ಬಸವರಾಜ, ಸುನಿತಾ, ಯಾಸ್ಮೀನ್ ಇತರರಿದ್ದರು.