

ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಮಳೆಗೆ ಪಟ್ಟಣದ ಮನೆಗಳಿಗೆ ನೀರು ನುಗ್ಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಪಟ್ಟಣದ ದೊಡ್ಡ ಕೆರೆ, ಮಲ್ಲನಾಯಕನ ಕಟ್ಟೆ ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ. ದೊಡ್ಡಕೆರೆ ಕೋಡಿ ಈಗಾಗಲೇ ಕಳೆದ ಒಂದು ವಾರದಿಂದ ಹರಿಯುತ್ತಿದ್ದು, ಶುಕ್ರವಾರ ತಡ ರಾತ್ರಿ ಭಾರಿ ಮಳೆಯಿಂದ ಪಟ್ಟಣದ ವಿದ್ಯಾನಗರ, ಹೊಸ ಹೌಸಿಂಗ್ ಬೋರ್ಡ್ ಕಾಲನಿ ಹಾಗೂ ಸೊಲ್ಲಮನ ಮರದ ಬಳಿಯ ಮನೆಗಳಿಗೆ ನೀರು ನುಗ್ಗಿದೆ. ಕೋಡಿ ನೀರು ಹರಿಯುವ ಕಾಲುವೆಗೆ ಸೂಕ್ತ ತಡೆಗೋಡೆ ಇಲ್ಲದೆ ನೀರು ಮನೆಗಳಿಗೆ ನುಗ್ಗಿದೆ. ಇದರಿಂದ ಮನೆಗಳ ಪಾತ್ರೆ,ದಿನಸಿ ಸಾಮಾನುಗಳು ನೀರಿನಿಂದ ಆವೃತ್ತವಾಗಿವೆ. ಪಟ್ಟಣದ ವಿದ್ಯಾ ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಪಪಂ ಸಿಬ್ಬಂದಿಗಳು ಜೆಸಿಬಿ ಯಂತ್ರಗಳಿಂದ ನೀರು ಸುಗಮವಾಗಿ ಹರಿಯಲು ಅನುವುಮಾಡಿಕೊಟ್ಟರು. ಜನರಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ವಿವಿಧ ಅಧಿಕಾರಿಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಳೆಗೆ ಪಟ್ಟಣದಲ್ಲಿ ನಾಲ್ಕು ಮನೆಗಳು ಜಖಂ ಆಗಿವೆ ಎಂದು ಗ್ರಾಮಲೆಕ್ಕಾಧಿಕಾರಿ ಪ್ರಭು ಕುಮಾರ ತಿಳಿಸಿದ್ದಾರೆ.
ಮಳೆಗಾಲ ಆರಂಭವಾದರೆ ಸುಗಮವಾಗಿ ನೀರು ಹರಿಯುವಂತೆ ಮಾಡಲು ರಾಜ ಕಾಲುವೆ ಸ್ವಚ್ಛಗೊಳಿಸಲು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ 1 ಕೋಟಿ ರೂ. ಅನುದಾನ ನೀಡಿದ್ದರು. 6 ತಿಂಗಳ ಹಿಂದೆ ಪಟ್ಟಣದ ಸುತ್ತಲಿನ ಎಲ್ಲ ಕಾಲುವೆಗಳಲ್ಲಿನ ಮುಳ್ಳು ಕಂಟಿಗಳನ್ನು ಕಿತ್ತು, ಕಾಲುವೆಯಲ್ಲಿನ ಹೂಳು ತಗೆದು ಸ್ವಚ್ಛಗೊಳಿಸಲಾಗಿತ್ತು.