ಸಂಡೂರು: ಸಂಡೂರು ವಿಧಾನಸಭೆ ಉಪಚುನಾವಣೆ ಅಂಗವಾಗಿ ಕುಡತಿನಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಶಾಸಕ ಜನಾರ್ದನ ರೆಡ್ಡಿ ಭಾಷಣಕ್ಕೆ ಅಡ್ಡಿಪಡಿಸಿದ ಜನರು, ರೈತರಿಂದ ಪಡೆದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಭೂಮಿ ಬೆಲೆ ಮರು ನಿಗದಿಪಡಿಸಿ, ಪರಿಹಾರ ನೀಡುವಂತೆ ಒತ್ತಾಯಿಸಿದರು.
ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ರೈತರಿಂದ ವಶಕ್ಕೆ ಪಡೆದ ಜಮೀನುಗಳಲ್ಲಿ ಸರ್ಕಾರ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಸೂಕ್ತ ಪರಿಹಾರ ನೀಡದೆ ಅನ್ಯಾಯವಾಗಿದ್ದು, ಸರಿಪಡಿಸಲು ನಾವು ಬಂದಿದ್ದೇವೆ ಎಂದರು.
ಅದಕ್ಕೆ ಜನರು ನಿಮ್ಮ ಅವಧಿಯಲ್ಲಿ ಜಮೀನು ವಶಕ್ಕೆ ಪಡೆದಿದ್ದು ಎಂದು ತರಾಟೆಗೆ ತೆಗೆದುಕೊಂಡರು. ರೆಡ್ಡಿ ಪ್ರತಿಕ್ರಿಯಿಸಿ, ರೈತರ ಜಮೀನುಗಳನ್ನು ಖರೀದಿಸಿದ ಮೇಲೆ ಕಾಂಗ್ರೆಸ್‌ನವರು ನನ್ನನ್ನು ಜೈಲಿಗೆ ಕಳಿಸಿದರು ಎಂದು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಜನರು ಸುಮ್ಮನಿರ ಕಾರಣ 14 ವರ್ಷದಿಂದ ಸಂಡೂರು ಕ್ಷೇತ್ರದಲ್ಲಿ ಆಳ್ವಿಕೆ ನಡೆಸಿದ ತುಕಾರಾಮ್, ಸಂತೋಷ ಲಾಡ್ ಅವರನ್ನು ಯಾಕೆ ಕೇಳಲಿಲ್ಲ. ಅವರನ್ನು ರಸ್ತೆಗೆ ಎಳೆದು ಕೇಳಬೇಕಾಗಿತ್ತು ಎಂದರು.
ಅಲ್ಲದೆ ಜನರನ್ನು ನಿಯಂತ್ರಿಸಲು ಆಗದ ಪೊಲೀಸರ ವಿರುದ್ಧ ಹರಿಹಾಯ್ದ ರೆಡ್ಡಿ, ಕುಡಿದು ಬಂದವರನ್ನು ಆಚೆಗೆ ಕಳಿಸಿ ಎಂದು ತಾಕೀತು ಮಾಡಿದರು ಎಂದರು. ಕೊನೆಗೆ ಜನ ಗಲಾಟೆ ಮಾಡಿದ್ದರಿಂದ ಸಭೆಯನ್ನು ಅರ್ಧಕ್ಕೆ ಮೊಟಕು ಗೊಳಿಸಿದರು.