ಕೊಪ್ಪರದಲ್ಲಿ ಶ್ರೀ ಲಕ್ಷ್ಮೀನರಸಿಂಹ ಬ್ರಹ್ಮೋತ್ಸವ ಅದ್ದೂರಿ

Koppara Venkateshwara Tmple
ದೇವದುರ್ಗ ತಾಲೂಕು ಕೊಪ್ಪರದದ ಶ್ರೀಲಕ್ಷ್ಮಿನರಸಿಂಹ ದೇವಸ್ಥಾನದಲ್ಲಿ ದಸರಾ ನಿಮಿತ್ತ ದೇವರಿಗೆ ವಿಶೇಷ ಅಲಂಕಾರ ಮಾಡಿರುವುದು.
Published on

ದೇವದುರ್ಗ: ತಾಲೂಕಿನ ಐತಿಹಾಸಿಕ ಕೊಪ್ಪರದ ಶ್ರೀಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಭಾನುವಾರ ಬ್ರಹ್ಮೋತ್ಸವ ಅದ್ದೂರಿಯಾಗಿ ಜರುಗಿತು.

ನವರಾತ್ರಿ ಉತ್ಸವ ನಿಮಿತ್ತ ತಿರುಪತಿ ತಿಮ್ಮಪ್ಪನ ದೇವಸ್ಥಾನ ಮಾದರಿಯಲ್ಲಿ 9 ದಿನ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಮೊದಲ ದಿನ ನವಿಲು, ಎರಡನೇ ದಿನ ಹನುಮ ದೇವರು, ಗರುಡ, ಶೇಷವಾಹನ, ಸಿಂಹಾರೂಢ, ಆನೆ, ಕುದುರೆ ಹೀಗೆ ಒಂದೊಂದು ವಾಹನದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ.

ಮಹಾನವಮಿ ಹಾಗೂ ವಿಜಯದಶಮಿ ದಿನ ಐವರಿಂದ ದೀಕ್ಷಾ ಕಾರ್ಯಕ್ರಮ, 108ಪ್ರದಕ್ಷಿಣೆ, ವೇದ ಮಂತ್ರಗಳು, ಪಾರಾಯಣ ಪಠಣ, ತುಳಸಿ ಅರ್ಚನೆ ಜರುಗಲಿದೆ ಎಂದು ದೇವಸ್ಥಾನ ಪ್ರಧಾನ ಅರ್ಚಕ ಗೋಪಿನಾಥ ಆಚಾರ್ಯರು ತಿಳಿಸಿದರು. ಆಚಾರ್ಯರಾದ ಅಶ್ವತ್ಥಾಚಾರ್ಯ, ಭೀಮಸೇನಾಚಾರ್ಯ, ಮಲ್ಲರಾವ್ ಕುಲಕರ್ಣಿ, ನರಹರಿ ಆಚಾರ್ಯ, ಭೀಮಸೇನ್, ಕೃಷ್ಣಾಚಾರ್ ಕೊಪ್ಪರ, ರಾಘವೇಂದ್ರ ಕೊಪ್ಪರ, ವ್ಯಾಸರಾಜ, ವಿಷ್ಣುತೀರ್ಥಾಚಾರ್ಯ ಇದ್ದರು.

ಗಬ್ಬೂರಿನಲ್ಲಿ ನವರಾತ್ರಿ ಬ್ರಹ್ಮೋತ್ಸವ: ಗಬ್ಬೂರು ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಬ್ರಹ್ಮೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ನಿತ್ಯ ಉಷ್ಣೋದಕ (ಬಿಸಿನೀರು) ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ, ಹೋಮ, ಹವನಗಳು ಮತ್ತು ಅಲಂಕಾರ ತೀರ್ಥ ಪ್ರಸಾದ ನಡೆಯುತ್ತಿದೆ.

ಸಂಜೆ ಸಾವಿರಾರು ಭಕ್ತರ ಮಧ್ಯೆ ಬ್ರಹ್ಮೋತ್ಸವ ಜರುಗುತ್ತದೆ. ಸೆ.30ರಂದು ದುರ್ಗಾ ಹೋಮ ಹಾಗೂ ಸಾವಿರದ ಎಂಟು ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಸಂಗೀತ ಕಾರ್ಯಕ್ರಮ ಜರುಗಲಿದೆ. ಅ.1ರಂದು ಆಯುಧ ಪೂಜೆ ಮತ್ತು ಸಂಜೆ ಅಶ್ವವಾಹನ ಮೆರವಣಿಗೆ ನಡೆಯಲಿದೆ. ಅ.2ರಂದು ವಿಜಯದಶಮಿ, ಮಹಾಪೂಜೆ ಅನ್ನಸಂತರ್ಪಣೆ ಮತ್ತು ಸಂಜೆ ಪಲ್ಲಕ್ಕಿ ಉತ್ಸವ, ಬನ್ನಿ ಮುಡಿಯುವ ಕಾರ್ಯಕ್ರಮದೊಂದಿಗೆ 11ದಿನಗಳ ದಸರಾ ಬ್ರಹ್ಮೋತ್ಸವ ಮಂಗಲಗೊಳ್ಳಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ಯ ಗುಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net