ಕೊಡಗಿನಲ್ಲಿ ಕಾಫಿಗೂ ಎದುರಾಯಿತು ಕಳ್ಳರ ಕಾಟ

In Kodagu, coffee also faced a war of thieves
Published on

ಸುನಿಲ್ ಪೊನ್ನೇಟಿ ಮಡಿಕೇರಿ
ಹಲವು ವರ್ಷಗಳ ನಂತರ ಈಗ ಕಾಫಿಗೆ ಉತ್ತಮ ಬೆಲೆ ಸಿಗುತ್ತಿದೆ. ಇದು ಬೆಳೆಗಾರರ ಪಾಲಿಗೆ ಖುಷಿಯ ವಿಷಯವಾಗಿದ್ದರೂ ಕೊಯ್ಲು ಮಾಡಿದ ಕಾಫಿ ಮಾರುಕಟ್ಟೆ ತಲುಪುವ ತನಕ ನೆಮ್ಮದಿ ಇಲ್ಲದ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ. ಕಣದಲ್ಲಿ ಒಣಹಾಕಿದ ಕಾಫಿಗೆ ಕಳ್ಳರ ಕಣ್ಣು ಬೀಳುತ್ತಿದ್ದು, ಸಿಕ್ಕಿದಷ್ಟು ದೋಚುವ ಮೂಲಕ ಬೆಳೆಗಾರರಿಗೆ ನಷ್ಟ ಉಂಟುಮಾಡುತ್ತಿದ್ದಾರೆ.

ಅತಿವೃಷ್ಠಿ, ಅನಾವೃಷ್ಠಿ, ಪ್ರಾಕೃತಿಕ ವಿಕೋಪ, ಮಾನವ-ವನ್ಯಜೀವಿ ಸಂಘರ್ಷ… ಹೀಗೆ ಹಲವು ಕಾರಣಗಳಿಂದ ಕಾಫಿ ಬೆಳೆಗಾರರು ಪ್ರತಿ ವರ್ಷ ನಷ್ಟಕ್ಕೆ ಒಳಗಾಗುವುದು ಸಾಮಾನ್ಯ. ಇದರ ಜತೆಗೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿರುವ ತೋಟಗಳ ನಿರ್ವಹಣಾ ವೆಚ್ಚ, ಉತ್ಪಾದನಾ ವೆಚ್ಚಕ್ಕೆ ಸರಿದೂಗದ ಮಾರುಕಟ್ಟೆ ಬೆಲೆ ಕಾಫಿ ಬೆಳೆಗಾರರನ್ನು ಈ ಕೃಷಿಯಿಂದ ವಿಮುಖರಾಗುವಂತೆ ಮಾಡಿತ್ತು. ಈ ಎಲ್ಲಾ ಕಾರಣಗಳಿಂದ ಜಿಲ್ಲೆಯ ಬಹುತೇಕ ಕಾಫಿ ತೋಟಗಳು ಮಾರಾಟವಾಗಿದ್ದವು. ಕೆಲವರು ತೋಟಗಳನ್ನು ಗುತ್ತಿಗೆ ಕೊಟ್ಟು ನಗರ ಸೇರಿಕೊಂಡಿದ್ದಾರೆ.

ಕಾಫಿ ಕೃಷಿಗೆ ಪ್ರತಿಕೂಲ ವಾತಾವರಣ ನಿರ್ಮಾಣವಾಗಿರುವ ಸ್ಥಿತಿಯಲ್ಲಿ ಈ ವರ್ಷ ಉತ್ತಮ ಬೆಲೆ ಸಿಗುತ್ತಿರುವುದು ಬೆಳೆಗಾರರಲ್ಲಿ ಸ್ವಲ್ಪ ಮಟ್ಟಿಗೆ ಖುಷಿ ಮೂಡಲು ಕಾರಣವಾಗಿದೆ. ಭಾನುವಾರದ (ಫೆ.೧೧) ಮಾರುಕಟ್ಟೆ ಮಾಹಿತಿ ಪ್ರಕಾರ ಅರೆಬಿಕಾ ಪಾರ್ಚಿಮೆಂಟ್ ೫೦ಕೆಜಿ ಚೀಲಕ್ಕೆ ೧೪,೦೦೦-೧೪,೨೦೦ ರೂ. ಬೆಲೆ ಇದೆ. ಅರೆಬಿಕಾ ಚೆರ‌್ರಿ ೫೦ಕೆಜಿ ಚೀಲಕ್ಕೆ ೭,೭೦೦-೭,೯೦೦ ರೂ. ಬೆಲೆ ಇದ್ದು, ಹಾಲಿ ಹೆಚ್ಚು ಮಾರುಕಟ್ಟೆಗೆ ಬರುತ್ತಿರುವ ರೋಬಸ್ಟಾ ಪಾರ್ಚಿಮೆಂಟ್ ೫೦ಕೆಜಿ ಚೀಲಕ್ಕೆ ೧೨,೮೦೦-೧೩,೦೦೦ ರೂ. ತನಕ ಬೆಲೆ ಇದ್ದು, ರೋಬಸ್ಟಾ ಚೆರ‌್ರಿ ೫೦ಕೆಜಿ ಚೀಲಕ್ಕೆ ೭,೪೦೦-೮,೦೦೦ ರೂ. ತನಕ ಖರೀದಿ ಆಗುತ್ತಿದೆ.

ಕಾಫಿ ಬೆಲೆ ಈ ವರ್ಷ ಸಾಮಾನ್ಯಕ್ಕಿಂತ ದುಪ್ಪಟ್ಟು ಆಗಿರುವುದು ಬೆಳೆಗಾರರಲ್ಲಿ ಹರ್ಷ ತಂದಿದೆ. ಇದರ ಜತೆ ಜತೆಯಲ್ಲಿ ಕಳ್ಳರಿಗೆ ಸುಗ್ಗಿ ಕಾಲವೂ ಶುರುವಾದಂತಿದೆ. ಬೆಲೆ ಕಡಿಮೆ ಇದ್ದಾಗಲೂ ಕಳ್ಳರ ಕರಾಮತ್ತು ಅಲ್ಲಲ್ಲಿ ವರದಿ ಆಗುತ್ತಿತ್ತು. ಆದರೆ ಈಗ ಕಾಫಿ ದುಬಾರಿ ಆದ ನಂತರ ಕಳ್ಳತನ ಪ್ರಕರಣಗಳೂ ಏರುಗತಿಯಲ್ಲಿದೆ. ಸಣ್ಣ ಪ್ರಮಾಣದಲ್ಲಿ ಕಾಫಿ ಕಳುವು ಅಷ್ಟಾಗಿ ಬೆಳಕಿಗೆ ಬಾರದಿದ್ದರೂ ಚೀಲಗಟ್ಟಲೆ ಕಾಫಿ ಕಳ್ಳರ ಪಾಲಾದಾಗ ಬೆಳೆಗಾರರು ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಿದ್ದಾರೆ.

೫ ತಾಲೂಕುಗಳನ್ನು ಒಳಗೊಂಡಿರುವ ಕೊಡಗು ಒಟ್ಟು ೪,೧೦೬ ಚ.ಕಿ.ಮೀ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಈ ಪೈಕಿ ೧,೧೯೭ ಚ.ಕಿ.ಮೀ ಪ್ರದೇಶದ ೧,೦೬,೯೨೧ ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತದೆ. ಜಿಲ್ಲೆಯ ಬಹುತೇಕ ಕಾಫಿ ತೋಟಗಳು ೧೦ ಹೆಕ್ಟೇರ್‌ಗಿಂತಲೂ ಕಡಿಮೆ ವಿಸ್ತೀರ್ಣದ ಸಣ್ಣ ಬೆಳೆಗಾರರ ಒಡೆತನದಲ್ಲಿದೆ. ಸಾಮಾನ್ಯವಾಗಿ ದೊಡ್ಡ ಹಿಡುವಳಿ ಹೊಂದಿರುವ ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿ ಒಣಗಿಸಲು ಸುಸಜ್ಜಿತ ವ್ಯವಸ್ಥೆ ಹೊಂದಿರುತ್ತಾರೆ. ಭದ್ರತೆ ಹೊಂದಿರುವ ಕಣ ಮಾತ್ರವಲ್ಲದೆ ಕಾವಲುಗಾರರನ್ನೂ ನೇಮಿಸಿಕೊಂಡಿರುತ್ತಾರೆ.

ಸಣ್ಣ ಕಾಫಿ ಬೆಳೆಗಾರರ ಪರಿಸ್ಥಿತಿ ಇದಕ್ಕಿಂತ ತೀರಾ ಭಿನ್ನವಾಗಿದೆ. ಎಲ್ಲರಲ್ಲೂ ಸುಸಜ್ಜಿತ ಕಣ ಇರುವುದಿಲ್ಲ. ಕೊಯ್ಲು ಮಾಡಿ ಭತ್ತದ ಗದ್ದೆಗಳನ್ನೇ ಸಮತಟ್ಟು ಮಾಡಿ ಅಲ್ಲಿ ಕಾಫಿ ಒಣಗಿಸಲಾಗುತ್ತದೆ. ಇದಕ್ಕೆ ಯಾವುದೇ ಭದ್ರತೆ ಇರುವುದಿಲ್ಲ. ಬೆಳೆಗಾರರೇ ರಾತ್ರಿ ಪೂರ್ತಿ ಕಾವಲು ಕಾಯುವ ಪರಿಸ್ಥಿತಿ ಇರುತ್ತದೆ. ಇಂತಹ ಕಾಫಿ ಕಣಗಳೇ ಕಳ್ಳರ ಟಾರ್ಗೆಟ್ ಆಗಿದ್ದು, ಹೊಂಚು ಹಾಕಿ ಕಣದಿಂದಲೇ ಕಾಫಿ ಕದ್ದೊಯ್ಯುತ್ತಾರೆ. ಸಮಯ ನೋಡಿ ಮಾರುಕಟ್ಟೆಯಲ್ಲಿ ಬಿಕರಿ ಮಾಡಿಬಿಡುತ್ತಾರೆ.

ಈ ವರ್ಷದ ಕಾಫಿ ಕೊಯ್ಲು ಹಂಗಾಮು ಆರಂಭವಾಗುತ್ತಿದ್ದಂತೆಯೇ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದ್ದರಿಂದ ಅಲ್ಲಲ್ಲಿ ಕಳ್ಳತನ ಪ್ರಕರಣಗಳೂ ವರದಿ ಆಗುತ್ತಿದ್ದವು. ಕೂಡಲೇ ಎಚ್ಚೆತ್ತುಕೊಂಡಿದ್ದ ಪೊಲೀಸ್ ಇಲಾಖೆ ಕಳ್ಳರ ಕೈಚಳಕಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಂಡಿತ್ತು. ಜಿಲ್ಲೆಯಲ್ಲಿನ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರ ಮಾಡುವವರೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗಿತ್ತು. ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರ ಸಂಪೂರ್ಣ ಮಾಹಿತಿ ಸಂಗ್ರಹಿಸುವಂತೆ ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳಿಗೂ ಸೂಚನೆಗಳನ್ನು ನೀಡಲಾಗಿತ್ತು.

ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರು ಕಾಫಿ, ಕಾಳು ಮೆಣಸು ಖರೀದಿ ಮಾಡುವ ಸಂದರ್ಭದಲ್ಲಿ ಮಾರಾಟ ಮಾಡುವವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬೇಕು ಎನ್ನುವ ಸೂಚನೆ ನೀಡಲಾಗಿತ್ತು. ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು ವ್ಯಾಪಾರಸ್ಥರ ಪರಿಶೀಲನೆ ಸಂದರ್ಭ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರು ಖರೀದಿದಾರರ ವಿವರವನ್ನು ಸಂಗ್ರಹಿಸದಿರುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನುವ ಎಚ್ಚರಿಕೆಯನ್ನೂ ಕೊಡಲಾಗಿತ್ತು.

ಆದರೂ ಜಿಲ್ಲೆಯಲ್ಲಿ ಕೆಲವು ವ್ಯಾಪಾರಸ್ಥರು ಪೊಲೀಸ್ ಇಲಾಖೆ ನಿಯಮಗಳನ್ನು ನಿರ್ಲಕ್ಷಿಸಿ ತಮ್ಮ ವ್ಯವಹಾರ ಮುಂದುವರಿಸಿರುವ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದಿದ್ದು. ಹಾಗಾಗಿ ಕಳುವು ಪ್ರಕರಣ ಪತ್ತೆಯಾದ ಸಂದರ್ಭದಲ್ಲಿ ಈಗ ಅಂಥ ಕಾಫಿ ಖರೀದಿಸಿದವರ ವಿರುದ್ಧವೂ ಪ್ರಕರಣ ದಾಖಲಾಗುತ್ತಿದೆ. ಕಳೆದ ವಾರವಷ್ಟೇ ಪೊಲೀಸರು ೧೫೦ ಚೀಲ ಕಾಫಿ ಕಳುವು ಪ್ರಕರಣ ಬೇಧಿಸಿದ್ದು, ಇದರಲ್ಲಿ ಕಾಫಿ ಕದ್ದ ಕಳ್ಳರು ಮಾತ್ರವಲ್ಲದೆ ಮಡಿಕೇರಿಯ ಜಿಟಿ ವೃತ್ತ ಬಳಿಯ ನೂರ್ ಟ್ರೇಡರ್ಸನಲ್ಲಿ ಯಾವುದೇ ರಶೀದಿ ಅಥವಾ ಬಿಲ್ ಇಲ್ಲದೇ ಖರೀದಿ ಮಾಡಿರುವ ಅಬ್ದುಲ್ ಅಜೀಜ್ ಎಂಬುವವರನ್ನು ದಸ್ತಗಿರಿ ಮಾಡಲಾಗಿತ್ತು. ಇದು ಇತರ ವ್ಯಾಪಾರಿಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ.

ಕಾಫಿ ಕಳುವು ತಡೆಗಟ್ಟಲು ಬೆಳೆಗಾರರು ಮತ್ತು ವ್ಯಾಪಾರಿಗಳ ಸಹಕಾರವೂ ಅಗತ್ಯವಾಗಿರುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. ಕಾಫಿ ಅಥವಾ ಕರಿಮೆಣಸು ವ್ಯಾಪಾರ ಸಂದರ್ಭ ಮಾರಾಟ ಮಾಡುವವರ ಬಗ್ಗೆ ಸಂಶಯ ಕಂಡು ಬಂದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ ೧೧೨ ಕ್ಕೆ ಕರೆ ಮಾಡಿ ಮಾಹಿತಿ ಒದಗಿಸಬಹುದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಮನೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಾಗಲೂ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ ಸಂಖ್ಯೆ ೧೧೨ಕ್ಕೆ ಕರೆ ಮಾಡಬಹುದಾಗಿದೆ.

ಕಾಫಿ ಕಳುವು ಪ್ರಕರಣಗಳು ಹೆಚ್ಚಿದ ನಂತರ ಇತ್ತೀಚೆಗೆ ಕೆಲವು ಬೆಳೆಗಾರರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹಲವೆಡೆ ಕಾಫಿ ಕಣಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದು ಕಂಡುಬರುತ್ತಿದೆ. ಮತ್ತೆ ಕೆಲವೆಡೆ ಕಾಫಿ ಕಣದ ಸುತ್ತಲೂ ಸೋಲಾರ್ ಬೇಲಿ ಹಾಕಿಸಿರುವುದನ್ನೂ ಅಲ್ಲಲ್ಲಿ ನೋಡಬಹುದಾಗಿದೆ.

ಕೊಡಗಿನಲ್ಲಿ ಯಾವುದೇ ಕಾಫಿ ಟ್ರೇಡರ್ಸ್‌ನವರು ಕಾಫಿ ಖರೀದಿ ಸಂದರ್ಭ ರಶೀದಿ ಅಥವಾ ಬಿಲ್ ನೀಡದೇ ಹಾಗೂ ಮಾರಾಟ ಮಾಡುವವರ ಸಂಪೂರ್ಣ ವಿವರವನ್ನು ಇಟ್ಟುಕೊಳ್ಳದೇ ವ್ಯವಹಾರ ನಡೆಸಿದಲ್ಲಿ ಮತ್ತು ಕಳ್ಳತನ ಮಾಡಿರುವ ಕಾಫಿಯನ್ನು ಖರೀದಿ ಮಾಡಿರುವುದು ಕಂಡಬಂದಲ್ಲಿ ಕಾಫಿ ಟ್ರೇಡರ್ಸ್ ಮಾಲೀಕರನ್ನು ನೇರ ಹೋಣೆಗಾರರನ್ನಾಗಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಕೆ. ರಾಮರಾಜನ್, ಕೊಡಗು ಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net