

ಅರಕೇರಾ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ತಂಡ ಖೋಖೋದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಕುಷ್ಟಗಿ ತಾಲೂಕಿನ ಹನುಮಸಾಗರ ಪ್ರೌಢ ಶಾಲೆ ಬಾಲಕಿಯರ ತಂಡದ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಜಯಭೇರಿ ಬಾರಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹನುಮಸಾಗರ ಶಾಲೆ ತಂಡದ ವಿದ್ಯಾರ್ಥಿಗಳು ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ಅಂಕ, ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ಅಂಕ ಗಳಿಸಿದ್ದರು. ಅರಕೇರಾ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ವಿದ್ಯಾರ್ಥಿನಿಯರ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಆರು ಅಂಕ, ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ಅಂಕ ಗಳಿಸಿ ಜಯ ಸಾಧಿಸಿದ್ದಾರೆ.
ವಿದ್ಯಾರ್ಥಿನಿಯರಾದ ಐಶ್ವರ್ಯ ಶಿವಪ್ಪ, ಐಶ್ವರ್ಯ ಚನ್ನಪ್ಪ, ಪವಿತ್ರ ಮಾರೆಪ್ಪ, ಮಹಾಲಕ್ಷ್ಮೀ ಯಲ್ಲಪ್ಪ, ಶೋಭಾ ಬಾಲಪ್ಪ, ಕಾವೇರಿ ಹನುಮಂತ್ರಾಯ, ಪವಿತ್ರ ಹನುಮಗೌಡ, ನಾಗರತ್ನಾ ಬಸವರಾಜ, ಅಮೀನಾ ಅಹ್ಮದ್ ಸಾಬ, ಶಾಂತ ನಾಗರಾಜ, ಪಲ್ಲವಿ ಸಾಬಯ್ಯ, ಯಶೋದಾ ಹನುಮಂತ ಇವರನ್ನು ಸನ್ಮಾನಿಸಲಾಯಿತು.
ಎರಡನೇ ಬಾರಿಗೆ ಆಯ್ಕೆ: ರಾಜ್ಯ ಮಟ್ಟದ ಕ್ರೀಡೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ತಾಲೂಕಿನ ಕುಗ್ರಾಮ ಮಲ್ಲಾಪುರ ವಿದ್ಯಾರ್ಥಿನಿಯರು ಎರಡನೇ ಬಾರಿಗೆ ರಾಜ್ಯಮಟ್ಟದ ಖೋ ಖೋ ಪ್ರತಿನಿಧಿಸಲಿದ್ದಾರೆ. ಈ ತಂಡದಲ್ಲಿ 8 ವಿದ್ಯಾರ್ಥಿಗಳು ಮಲ್ಲಾಪುರ ಗ್ರಾಮದವರೇ ಆಗಿರುವುದು ವಿಶೇಷ. ಅಲ್ಲದೇ ಮಲ್ಲಾಪುರ ಗ್ರಾಮದ ಇದೇ ವಿದ್ಯಾರ್ಥಿನಿಯರು ಕಳೆದ ಎರಡು ವರ್ಷಗಳ ಹಿಂದೆ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.