ಕೈ-ಕಮಲ ಜಗಳದಲ್ಲಿ ಸಾಬ್ರು ಬಲಿ, ಮುಸಲ್ಮಾನರು ಬಡಕೂಸುಗಳಾ? ನಮ್ಮನ್ನು ಬಿಟ್ಟು ಬಿಡಿ ಎಂದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ

CM Ibrahim
Published on

ವಿಜಯಪುರ: ಕಾಂಗ್ರೆಸ್-ಬಿಜೆಪಿ ಜಗಳದಲ್ಲಿ ಸಾಬರ (ಮುಸ್ಲಿಂರು)ನ್ನು ಏಕೆ ಬಲಿಕೊಡುತ್ತಿದ್ದೀರಿ? ನಾವೇನು ಬಡಕೂಸುಗಳಾ? ನಮ್ಮನ್ನು ಬಿಟ್ಟು ಬಿಡಿ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾರ್ಮಿಕವಾಗಿ ನುಡಿದರು.

ರಾಜ್ಯದಲ್ಲಿ ಬಿಜೆಪಿಗರಿಗೆ ಹೋರಾಟ ಮಾಡಲು ಸಾಕಷ್ಟು ವಿಷಯಗಳಿವೆ. ಕಾಂಗ್ರೆಸ್‌ಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ವಕ್ಫ್‌ಗೆ ಯಾಕೆ ಜೋತು ಬಿದ್ದಿದ್ದೀರಿ. ಯತ್ನಾಳ ಅವರು ರಾಜ್ಯ ಸರ್ಕಾರದ ವಿರುದ್ಧ ಕೃಷ್ಣಾ ನೀರಾವರಿ ಯೋಜನೆ ಅನುಷ್ಟಾನಕ್ಕಾಗಿ ಹೋರಾಟ ಮಾಡಲಿ. ಇಲ್ಲವೇ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣಕ್ಕಾಗಿ ಧ್ವನಿ ಎತ್ತಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಸಲಹೆ ನೀಡಿದರು.

ಕಾಂಗ್ರೆಸ್ ಗಾಬರಿ ಪಡುವ ಅಗತ್ಯವಿರಲಿಲ್ಲ

ವಕ್ಫ್ ವಿಚಾರದಲ್ಲಿ ರಾಜ್ಯ ಸರ್ಕಾರ ಗಾಬರಿ ಪಡುವ ಅಗತ್ಯವೇ ಇರಲಿಲ್ಲ. ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಇದ್ದು, ಪಹಣಿ ಹೊಂದಿರುವ ರೈತರು ಆತಂಕ ಪಡೆಯುವ ಅಗತ್ಯವಿಲ್ಲ. ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲೂ 245 ನೋಟಿಸ್‌ಗಳನ್ನು ಜಾರಿ ಮಾಡಲಾಗಿತ್ತು. ಇದೇ ಪರಂಪರೆಯನ್ನೂ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಸರ್ಕಾರ ಹೇಳಬೇಕಿತ್ತು. ಆದರೆ, ದುರ್ದೈವ ಮದುವೆಯಾಗಿ ಮಕ್ಕಳಾದ ಮೇಲೆ ಸಿದ್ದರಾಮಯ್ಯ ಆದೇಶ ಹಿಂಪಡೆದಿದ್ದಾರೆ. ನಿಶ್ಚಿತಾರ್ಥದ ಸಮಯದಲ್ಲಿಯೇ ಈ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಇಬ್ರಾಹಿಂ ವ್ಯಂಗ್ಯವಾಡಿದರು.

ಪ್ರತಿ ಬಾರಿಯೂ ರಾಜಕೀಯ ಲಾಭಕ್ಕಾಗಿ ಸಾಬರನ್ನೇ ಎಳೆದು ತರಲಾಗುತ್ತಿದೆ. ಈ ಹಿಂದೆ ಹಿಜಾಬ್ ಗದ್ದಲವಾಯಿತು. ಹಿಜಾಬ್ ಎಂದರೆ ಸೆರಗು. ಸೆರಗು ಯಾರೂ ಹಾಕುವುದಿಲ್ಲವೇ? ಕಿತ್ತೂರು ರಾಣಿ ಚನ್ನಮ್ಮ, ಇಂದಿರಾ ಗಾಂಧಿ ಸಹ ಸೆರಗು ಹಾಕಿಕೊಂಡಿದ್ದರು. ಅದರ ಬಗ್ಗೆ ಯಾರದ್ದಾದರೂ ತಕರಾರು ಇತ್ತೇ? ಎಂದರು.

ವಕ್ಫ್ ವಿಚಾರದಲ್ಲಿ ಅನ್ವರ್ ಮಣಿಪ್ಪಾಡಿ ವರದಿ ಇದ್ದರೆ, ಯಡಿಯೂರಪ್ಪ ಸರ್ಕಾರದಲ್ಲಿ ಯಾಕೆ ಸಿಬಿಐಗೆ ಕೊಡಲಿಲ್ಲ? ಈಗಲೂ ಸರ್ಕಾರ ಈ ವರದಿಯನ್ನು ಸಿಬಿಐಗೆ ಕೊಡಲಿ. ತಪ್ಪಿಸ್ಥರಿಗೆ ಶಿಕ್ಷೆಯಾಗಲಿ ಎಂದರು.

ಸರ್ವರಿಗೂ ಪರಿಹಾರ ಕೊಡಿ

ದೇವಸ್ಥಾನದಲ್ಲಿ ಮಂಗಳಾರತಿ ಮಾಡುವವರು ತಟ್ಟೆ ಕಾಸಿನಲ್ಲಿ ಜೀವನ ಮಾಡಬೇಕು. ದೇವಸ್ಥಾನಗಳ ಜಮೀನುಗಳು ಹೋಗಿವೆ. ಇದಕ್ಕಾದರೂ ಪರಿಹಾರ ಕೊಟ್ಟಿದ್ದೀರಾ?. ವಕ್ಫ್, ದೇವಸ್ಥಾನ ಜಮೀನು ಹೋದರೂ ಮೂರು ಪಟ್ಟು ಪರಿಹಾರ ಕೊಡುವ ಕಾನೂನನ್ನು ಸರ್ಕಾರ ತರಬೇಕು. ಆ ಭಾಗ್ಯ, ಈ ಭಾಗ್ಯ ಎಂದು ಹೇಳಿ, ಮಹಿಳೆಯರನ್ನು ಬಸ್ ಹತ್ತಿಸಿ ಸುತ್ತಿಸುವುದು ನಿಲ್ಲಿಸಿ. ಮಠ, ದೇವಸ್ಥಾನ, ವಕ್ಫ್, ಕ್ರೈಸ್ತರ ಜಮೀನಿಗೂ ಪರಿಹಾರ ಕೊಡುವ ಕೆಲಸ ಮಾಡಿ ಎಂದು ಒತ್ತಾಯಿಸಿದರು.

ಮಾನ ಹಾನಿ ಮೊಕದ್ದಮೆ

ವಕ್ಫ್ ಆಸ್ತಿ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಸಿ.ಎಂ. ಇಬ್ರಾಹಿಂ ವಕ್ಫ್ ಆಸ್ತಿ ತಿಂದಿದ್ದಾರೆ ಎಂದು ಹೇಳಿದ್ದು, ನಾನು ಈಗಾಗಲೇ ವಕೀಲರ ಮೂಲಕ ನೋಟಿಸ್ ಕೊಟ್ಟು 5 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಲಾಗುತ್ತಿದೆ ಎಂದರು.

ನಾನು ಯಾವ ಊರಿನಲ್ಲಿ ವಕ್ಫ್ ಆಸ್ತಿ ತಿಂದಿದ್ದೀನಿ? ಎಷ್ಟು ಆಸ್ತಿ? ಸರ್ವೆ ನಂಬರ್ ಏನು? ಖಾತಾ ಸಂಖ್ಯೆ ಏನು? ಎಂಬುವುದನ್ನು ಜನರ ಮುಂದೆ ಬಹಿರಂಗ ಪಡಿಸಿ. ಇಲ್ಲವಾದರೆ, ನಾನು ಹೇಳಿರುವುದು ತಪ್ಪು ಎಂದು ಕ್ಷಮೆ ಕೇಳಿ ಎಂದಿದ್ದೇನೆ. ಯತ್ನಾಳ ರಾತ್ರಿ ಹೊತ್ತು ಮುಸ್ಲಿಂರ ಮನೆಯಲ್ಲಿ ಊಟ ಮಾಡಿ ಬೆಳಗ್ಗೆ ಅದೇ ಮುಸ್ಲಿಂರಿಗೆ ಬೈಯುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net