

ಸಿಂಧನೂರು: ನಗರದ ಸತ್ಯಗಾರ್ಡನ್‌ನಲ್ಲಿ ಕರ್ನಾಟಕ ಸೋಲಿಡಾರಿಟಿ ಯೂಥ್ ಮೂವ್‌ಮೆಂಟ್ ಆಶ್ರಯದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಗದಗ ಮತ್ತು ವಿಜಯಪುರ ತಂಡಗಳ ನಡುವೆ ಭಾನುವಾರ ಅಂತಿಮ ಹಣ-ಹಣಿ ನಡೆಯಿತು. ಗದಗ ಜಿಲ್ಲೆಯ ರೋಣದ ಬಿ.ಸಿ.ರಮೇಶ ತಂಡ ಚಾಂಪಿಯನ್ ಶಿಫ್ ಪಡೆಯುವಲ್ಲಿ ಯಶಸ್ವಿಯಾಯಿತು.
ಅಂತಿಮ ಪಂದ್ಯದಲ್ಲಿ ಎರಡೂ ತಂಡಗಳು ತಲಾ 29 ರಂತೆ ಸಮನಾಗಿ ಅಂಕಗಳನ್ನು ಹಂಚಿಕೊಂಡ ಕಾರಣ 5 ರೈಡ್‌ಗಳನ್ನು ಹೆಚ್ಚುವರಿಯಾಗಿ ಕೊಡಲಾಗಿತ್ತು. ಆಗ ಗದಗ ಜಿಲ್ಲೆಯ ರೋಣದ ಬಿ.ಸಿ.ರಮೇಶ ತಂಡ 36 ಅಂಕಗಳನ್ನು ಪಡೆಯಿತು. ಬಿಜಾಪುರ ತಂಡ 35 ಅಂಕಗಳನ್ನು ಪಡೆದು ಸೋತಿತು. ಕೊಪ್ಪಳದ ಗವಿಶ್ರೀ ತಂಡ ಮತ್ತು ರಾಯಚೂರು ತಂಡದ ನಡುವೆ ನಡೆದ ಪೈಪೋಟಿಯಲ್ಲಿ ಕೊಪ್ಪಳ 28 ಅಂಕ ಪಡೆದು ಜಯಸಾಧಿಸಿ ತೃತಿಯ ಸ್ಥಾನ ತಲುಪಿತು. ರಾಯಚೂರು ತಂಡ 22 ಅಂಕ ಪಡೆದು ಹಿನ್ನಡೆ ಅನುಭವಿಸಿತು.
ಟೂರ್ನಿಯ ಚಾಂಪಿಯನ್ ಆಗಿ ರೋಣದ ಬಿ.ಸಿ.ರಮೇಶ ತಂಡ ಹೊರಹೊಮ್ಮುವ ಮೂಲಕ 50 ಸಾವಿರ ರೂ. ಬಹುಮಾನ ಗಿಟ್ಟಿಸಿಕೊಂಡಿತು. ದ್ವಿತೀಯ ಸ್ಥಾನ ಪಡೆದ ಬಿಜಾಪುರ ತಂಡ 30 ಸಾವಿರ ರೂ., ತೃತಿಯ ಸ್ಥಾನ ಪಡೆದ ಕೊಪ್ಪಳದ ಗವಿಶ್ರೀ ತಂಡ 10 ಸಾವಿರ ರೂ. ನಗದು ಬಹುಮಾನಗಳನ್ನು ಪಡೆದುಕೊಂಡವು. ಉತ್ತಮ ದಾಳಿಗಾರ ಬಹುಮಾನ ಗದಗಿನ ನಾಗರಾಜ ಜುಲಗುಡ್ಡ ಬಾಚಿಕೊಂಡಿದ್ದಾರೆ. ಉತ್ತಮ ಹಿಡಿತಗಾರ ಬಹುಮಾನವನ್ನು ರಾಯಚೂರಿನ ರಮೇಶ, ಸರ್ವೋತ್ತಮ ಆಟಗಾರ ಬಹುಮಾನ ಬಿಜಾಪುರದ ಅಭಿಜಿತ್ ಪಡೆದಿದ್ದಾರೆ. ಒಳ್ಳೆಯ ಆಟಗಾರ ಬಹುಮಾನ ಕೊಪ್ಪಳದ ಹನುಮನಗೌಡರ ಪಾಲಾಗಿದೆ. ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು.