

ಮೈಸೂರು: ಮೈಸೂರು ತಾಲೂಕಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 15 ಜನರಿಗೆ ವಾಂತಿ, ಭೇದಿಯಾಗಿದೆ. ಐದು ಜನರ ಸ್ಥಿತಿ ಗಂಭೀರವಾಗಿದೆ.
ಇಬ್ಬರು ಮಕ್ಕಳು, ಮೂವರು ಮಹಿಳೆಯರು ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಒಡೆದು ಮಳೆ ನೀರು ಮಿಶ್ರಣಗೊಂಡಿದ್ದು, ಈ ನೀರನ್ನೇ ಕುಡಿದು ನಂತರ ಹಲವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಡಾ.ಪುಟ್ಟತಾಯಮ್ಮ, ಸಾಲುಂಡಿ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಿದರು. ಬಳಿಕ ಗ್ರಾಮಕ್ಕೆ ತೆರಳಿ ಯಾರಿಗಾದರೂ ಅನಾರೋಗ್ಯದ ಲಕ್ಷಣಗಳಿದ್ದರೆ ತುರ್ತಾಗಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಲ್ಪಶ್ರೀ ಮತ್ತು ಸಿಬ್ಬಂದಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಚಿಕಿತ್ಸೆ ನೀಡಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಟ್ಯಾಂಕ್‌ನಲ್ಲಿ ಶೇಖರಣೆಯಾಗಿದ್ದ ಕಲುಷಿತ ನೀರನ್ನು ತೆರವು ಮಾಡಿದರು.