

ಕಂಪ್ಲಿ: ತಾಲೂಕಿನ ಗಡಿ ಶಾಲೆಯಾದ ನಂ.1 ಇಟಗಿ ಗ್ರಾಮದ ಸಹಿಪ್ರಾ ಶಾಲೆ 8ನೇ ತರಗತಿಗೆ ಉನ್ನತೀಕರಣಗೊಂಡು 12ವರ್ಷಗಳಾದರೂ 9ನೇತರಗತಿ ಆರಂಭಗೊಂಡಿಲ್ಲ. 9ನೇ ತರಗತಿ ಆರಂಭಿಸುವಂತೆ ಗ್ರಾಮಸ್ಥರ ಒತ್ತಾಯ ಅರಣ್ಯರೋಧನವಾಗಿದೆ.
ಇಟಗಿಯ ಸಹಿಪ್ರಾ ಶಾಲೆಯಲ್ಲಿ ಎಲ್‌ಕೆಜಿಯಿಂದ 8ನೇ ತರಗತಿವರೆಗೆ ಒಟ್ಟು 290 ವಿದ್ಯಾರ್ಥಿಗಳಿದ್ದು ಇವರಲ್ಲಿ 170ವಿದ್ಯಾರ್ಥಿನಿಯರಿದ್ದಾರೆ. 2025-26ನೇ ಸಾಲಿನ 8ನೇತರಗತಿಯಲ್ಲಿ 21ವಿದ್ಯಾರ್ಥಿನಿಯರು, 14 ವಿದ್ಯಾರ್ಥಿಗಳಿದ್ದಾರೆ. ಗ್ರಾಮೀಣ ವಿದ್ಯಾರ್ಥಿನಿಯರ ದೃಷ್ಟಿಯಿಂದ ಕಳೆದ ಅನೇಕ ವರ್ಷಗಳಿಂದ 9ನೇ ತರಗತಿ ಆರಂಭಿಸುವಂತೆ ಸಾರ್ವಜನಿಕರು, ಎಸ್‌ಡಿಎಂಸಿಯವರು ಶಿಕ್ಷಣ ಇಲಾಖೆಯನ್ನು, ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತ ಬಂದಿದ್ದರೂ 9ನೇತರಗತಿ ಆರಂಭಿಸುವ ಲಕ್ಷಣಗಳೇ ತೋರುತ್ತಿಲ್ಲ.
ಇಟಗಿ ಶಾಲೆಯ 8ನೇತರಗತಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳು 9ನೇತರಗತಿ ಅಭ್ಯಾಸಕ್ಕಾಗಿ 12ಕಿ.ಮೀ.ದೂರದ ಕಂಪ್ಲಿಗೆ, ಅಥವಾ 8ಕಿ.ಮೀ ದೂರದ ಸಿರಗುಪ್ಪ ತಾಲೂಕಿನ ಮಣ್ಣೂರಿಗೆ ಹೋಗಬೇಕಿದೆ. ಸದ್ರಿ ಶಾಲೆಯಲ್ಲಿಯೇ 9ನೇತರಗತಿ ಆರಂಭಗೊಂಡಲ್ಲಿ ಗ್ರಾಮೀಣ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಬೇರೆಡೆಗೆ 9ನೇ ತರಗತಿ ಓದಿಸಲು ಹೆಣ್ಣುಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟುಹಾಕುತ್ತಾರೆ.
ಮುಖ್ಯಶಿಕ್ಷಕರು, ಎಸ್‌ಡಿಎಂಸಿಯವರು ಪೋಷಕರನ್ನು ಕಾಡಿಬೇಡಿ 9ನೇತರಗತಿಗೆ ವಿದ್ಯಾರ್ಥಿನಿಯರನ್ನು ಬೇರೆಡೆ ಸೇರಿಸಲು ಒಪ್ಪಿಸಿ ಟಿಸಿ ಕೊಟ್ಟು ಸಾಗಹಾಕುತ್ತಾರೆ. ಆದರೆ, 9ನೇತರಗತಿಗೆ ವಿದ್ಯಾರ್ಥಿನಿ ಸರಿಯಾಗಿ ಶಾಲೆಗೆ ಹೋಗುವುದಿಲ್ಲ. ಇಲ್ಲಿ 9ನೇತರಗತಿ ಆರಂಭಗೊಂಡರೆ ಇಟಗಿ, ನಂ.2ಮುದ್ದಾಪುರ ಗ್ರಾಮಗಳ ಮಕ್ಕಳು ಸೇರುತ್ತಾರೆ. ಶಾಲೆಯಲ್ಲಿ ಮಂಜೂರಾದ 10ಹುದ್ದೆಗಳಲ್ಲಿ ನಾಲ್ವರು ಖಾಯಂ ಶಿಕ್ಷಕರಿದ್ದು, 6ಹುದ್ದೆ ಖಾಲಿಇವೆ. ಶಿಕ್ಷಣ ಮೂಲಭೂತ ಹಕ್ಕು ಎನ್ನುವ ಶಿಕ್ಷಣ ಇಲಾಖೆ ಯಾವುದೋ ನೆಪದಲ್ಲಿ ಅರ್ಹ ಸೌಲಭ್ಯ ಕಲ್ಪಿಸುತ್ತಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 9ನೇತರಗತಿ ಆರಂಭಿಸುವಂತೆ ಗ್ರಾಮಸ್ಥರಾದ ಸಣ್ಣ ಬಾಲೇಸಾಬ್, ಮಣ್ಣೂರು ವೆಂಕಟೇಶ, ದೊಡ್ಡ ದಾದಾ ಖಲಂದರ್, ಅಯ್ಯೋಧಿ ಪಕ್ಕೀರಪ್ಪ ಇತರರು ಒತ್ತಾಯಿಸಿದ್ದಾರೆ.
ಸದ್ಯ ಶಾಲೆಯಲ್ಲಿ 11ವಿದ್ಯಾರ್ಥಿನಿಯರು, 8ವಿದ್ಯಾರ್ಥಿಗಳು 8ನೇತರಗತಿ ಉತ್ತೀರ್ಣರಾಗಿದ್ದು 9ನೇತರಗತಿ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಇದೇ ಶಾಲೆಯಲ್ಲಿ 9ನೇ ತರಗತಿ ಆರಂಭಿಸಿದಲ್ಲಿ ಸಣಾಪುರ, ನಂ.2ಮುದ್ದಾಪುರ ಗ್ರಾಮಗಳ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಆರು ಜನ ಖಾಯಂ ಶಿಕ್ಷಕರನ್ನು ನೀಡಲಿ. 9ನೇತರಗತಿ ಆರಂಭಿಸುವಲ್ಲಿ ಶಿಕ್ಷಣ ಇಲಾಖೆ ಮುಂದಾಗಲಿ. ಮುಕ್ಕುಂದಿ ತೋಟಪ್ಪ ಎಸ್‌ಡಿಎಂಸಿ ಅಧ್ಯಕ್ಷ, ಸಹಿಪ್ರಾ ಶಾಲೆ, ಇಟಗಿ 9ನೇತರಗತಿ ಆರಂಭಕ್ಕೆ ಈಗಾಗಲೇ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 9ನೇತರಗತಿ ಆರಂಭಕ್ಕೆ ಕನಿಷ್ಟ 50ವಿದ್ಯಾರ್ಥಿಗಳ ಅಗತ್ಯವಿದೆ. ಇಲ್ಲಿ ಶಿಕ್ಷಕರ ಕೊರತೆಯೂ ಇದೆ. ಇಟಗಿ ಸಹಿಪ್ರಾ ಶಾಲೆಯಲ್ಲಿ 9ನೇತರಗತಿ ಆರಂಭಗೊಂಡಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಎನ್.ಬಿ.ರೇಣುಕಾರಾಧ್ಯ ಸಿಆರ್‌ಪಿ, ಎಸ್.ಎನ್.ಪೇಟೆ-ಕಂಪ್ಲಿ.