ನಟ ಶಿವರಾಜಕುಮಾರ ಹುಬ್ಬಳ್ಳಿಗೆ,  ರಣಗಲ್ ಸಂಭ್ರಮಕ್ಕೆ ಸಿದ್ಧತೆ

IMG-20241123-WA0006.jpg
Published on

ಹುಬ್ಬಳ್ಳಿ: ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ "ಭೈರತಿ ರಣಗಲ್' ಕನ್ನಡ ಚಿತ್ರದ ಸಂಭ್ರಮೋತ್ಸವ ನ. 25ರಂದು ಮಧ್ಯಾಹ್ನ 3.30ಕ್ಕೆ ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿದ್ದು, ನಟ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಭಾಗವಹಿಸಲಿದ್ದಾರೆ ಎಂದು ಡಾ. ರಾಜಕುಮಾರ ಅಭಿಮಾನಿಗಳ ಸಂದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೀತಾ ಶಿವರಾಜಕುಮಾರ ನಿರ್ಮಾಣದ ಚಿತ್ರ ಸಿನಿಮಾ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದಕ್ಕಾಗಿ "ರಣಗಲ್ ಸಂಭ್ರಮ' ಹೆಸರಿನಲ್ಲಿ ಅದ್ದೂರಿ ಉತ್ಸವ ಆಯೋಜಿಸಲಾಗಿದೆ. ಖ್ಯಾತ ನಿರ್ಮಾಪಕ ಕೆ.ಪಿ. ಶ್ರೀಕಾಂತ ಅವರು ಸಹ ಭಾಗವಹಿಸಲಿದ್ದು, ಅಭಿಮಾನಿಗಳಿಂದ ಸನ್ಮಾನ ನಡೆಯಲಿದೆ ಎಂದರು.

ಸಂಭ್ರಮಾಚರಣೆ ಪ್ರಯುಕ್ತ ನ. 24ರಂದು ಬೆಳಗ್ಗೆ 10ಕ್ಕೆ ಯುವ ರತ್ನ ಅಪ್ಪು ಅಭಿಮಾನಿಗಳ ಸಂದ ಅಧ್ಯಕ್ಷ ಆನಂದ ಡಿ. ಡೊಂಗಿ ನೇತೃತ್ವದಲ್ಲಿ ಶ್ರೀ ಸಿದ್ಧಾರೂಢ ಮಠದಲ್ಲಿ ಶಿವರಾಜಕುಮಾರ ಹೆಸರಿನಲ್ಲಿ ಅಭಿಷೇಕ ಹಾಗೂ ಪೂಜೆ ಏರ್ಪಡಿಸಲಾಗಿದೆ.

25ರಂದು ಬೆಳಗ್ಗೆ 10ಕ್ಕೆ ಸುನೀಲ ಮರಾಠೆ ನೇತೃತ್ವದಲ್ಲಿ ಶ್ರೀ ಜಗದ್ಗುರು ಮೂರುಸಾವಿರ ಮಠದಲ್ಲಿ ಶಿವರಾಜಕುಮಾರ ಹೆಸರಿನಲ್ಲಿ ಅಭಿಷೇಕ, ಪೂಜೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಅಪ್ಸರಾ ಚಿತ್ರಮಂದಿರ ಬಳಿ ನವನಗರ ಪಂಚಾಕ್ಷರಿನಗರದ ಶ್ರೀ ನವಶಕ್ತಿ ಮಹಿಳಾ ಮಂಡಳದ ಅಧ್ಯೆ ಶೋಭಾ ವಿ. ಅಪ್ಪಾಜಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಆರತಿ ಎತ್ತಿ ಶಿವರಾಜಕುಮಾರ ಅವರನ್ನು ಸ್ವಾಗತ ಮಾಡಲಿದ್ದಾರೆ. ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ದ್ಯಾಮಣ್ಣ ಡೊಂಗಿ, ಕಾರ್ಯದರ್ಶಿ ಜಗದೀಶ ರಿತ್ತಿ, ಡಾ. ರಾಜಕುಮಾರ ಅಭಿಮಾನಿ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವಿಜಯಕುಮಾರ ಅಪ್ಪಾಜಿ, ಶಿವರಾಜ ಗೌರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net