

ತುಮಕೂರು: ಗೂಳೂರು ಏತನೀರಾವರಿ ಯೋಜನೆ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಲಾಗಿದೆ ಎಂದು ಆರೋಪಿಸಿರುವ ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್, ಹಂಚಿಕೆಯಾಗಿರುವ 300 ಎಂಸಿಎಫ್‌ಟಿ ನೀರನ್ನು 42 ಕೆರೆಗಳಿಗೆ ತುಂಬಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ತಾಲೂಕಿನ ಸಿರಿವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ 11 ಕೋಟಿ ರೂ., ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಶಂಕಸ್ಥಾಪನೆ ಹಾಗೂ ಮಹಿಳೆಯರಿಗೆ ಬಾಗಿನ ವಿತರಿಸಿ ಮಾತನಾಡಿದ ಅವರು, ಹೇಮಾವತಿ ನೀರನ್ನು ಅಕ್ಕಪಕ್ಕದ ತಾಲೂಕುಗಳಲ್ಲಿ ಗುರುತ್ವಾಕರ್ಷಣೆಯ ಮೂಲಕ ಕೊಂಡ್ಯೊಯ್ದಿದ್ದರೆ, ಇಲ್ಲಿ ಏತ ನೀರಾವರಿ ಅನುಷ್ಠಾನಗೊಳಿಸಲಾಗಿದೆ, ಆದರೆ ಕೆರೆಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ. ಗುರುತ್ವಾಕರ್ಷಣೆ ಮೂಲಕ ನೀರು ಹರಿಸಿದ್ದರೆ, ಈ ಭಾಗದ ಎಲ್ಲ ಕೆರೆಗಳು ತುಂಬುತ್ತಿದ್ದವು, ಗೂಳೂರು ಏತ ನೀರಾವರಿ ವಿಫಲ ಯೋಜನೆಯಾಗಿದೆ ಎಂದು ಕಿಡಿಕಾರಿದರು.
ಕಳೆದ 30 ವರ್ಷಗಳಿಂದ ತುಂಬಿಸಲಾಗದ ಗಳಗ ಕೆರೆಯನ್ನು ಹೋರಾಟ ಮಾಡಿ ತುಂಬಿಸಿದ್ದೇನೆ. ಈ ಭಾಗದ 500ಕ್ಕೂ ಹೆಚ್ಚು ಕೊಳವೆಬಾವಿಗಳ ಅಂತರ್ಜಲಮಟ್ಟ ಹೆಚ್ಚಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ ಎಂದು ಬೊಗಳೆ ಬಿಡುತ್ತಿದ್ದರು, ಕೋಡಿಮುದ್ದನಹಳ್ಳಿಯಲ್ಲಿ ರಸ್ತೆಯೇ ಇರಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 500 ಕೋಟಿ ರೂ., ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೋಡಿ ಮುದ್ದನಹಳ್ಳಿಯಲ್ಲಿ 20 ಎಕರೆಯಲ್ಲಿ 220 ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣಕ್ಕೆ ಭೂಮಿ ಹಸ್ತಾಂತರಿಸಲಾಗಿದೆ, ಮೊದಲ ಕಂತಿನಲ್ಲಿ 3 ಸಾವಿರ ನಿವೇಶನಗಳನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಂಚಲಾಗುತ್ತಿದೆ ಎಂದರು.
2 ಸಾವಿರ ಮಹಿಳೆಯರಿಗೆ ಬಾಗಿನ: ಸಿರಿವರ ಭಾಗದ ಸುಮಾರು 2 ಸಾವಿರ ಮಹಿಳೆಯರಿಗೆ ದೀಪಾವಳಿ ಅಂಗವಾಗಿ ಸೀರೆ ವಿತರಿಸಲಾಯಿತು, ಕಾರ್ಯಕ್ರಮಕ್ಕೂ ಮುನ್ನ ಗೂಳೂರು, ಹೊಸೂರು, ಮಾನಂಗಿ, ನಂದಿಹಳ್ಳಿ ಸೇರಿ ಗ್ರಾಮಾಂತರ ಕ್ಷೇತ್ರದ ವಿವಿಧೆಡೆ 2 ಕೋಟಿ ರೂ., ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ತಾಪಂ ಸದಸ್ಯ ರಂಗಸ್ವಾಮಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಹಾಲನೂರು ಅನಂತಕುಮಾರ್, ಎಸ್ಸಿ ಘಟಕದ ಅಧ್ಯಕ್ಷ ಬೆಳಗುಂಬ ವೆಂಕಟೇಶ್, ಕಾರ್ಯಾಧ್ಯಕ್ಷ ಸುರೇಶ್, ಮುಖಂಡರಾದ ತಿಮ್ಮಪ್ಪಗೌಡ, ಲಾಟರಿ ನಾರಾಯಣಪ್ಪ, ನರುಗನಹಳ್ಳಿ ವಿಜಯಕುಮಾರ್, ವೆಂಕಟೇಶ್‌ಗೌಡ, ನರಸಪ್ಪ, ಪ್ರಕಾಶ್, ಮಹದೇವ್, ಅಬ್ಬಾಸ್, ಬೋರೇಗೌಡ, ಗಂಗಣ್ಣ, ಕೆ.ಬಿ.ರಾಜಣ್ಣ, ಲೋಕೇಶ್ ಇತರರಿದ್ದರು.