

ಕೇಶವಮೂರ್ತಿ ವಿ.ಬಿ. ಹಾವೇರಿ
ಜಿಲ್ಲಾ ಕೇಂದ್ರವಾದ ಹಾವೇರಿ ನಗರಕ್ಕೆ ಕಸದ ಸಮಸ್ಯೆ ಕಾಡುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಪೌರ ಕಾರ್ವಿುಕರು ಹಾಗೂ ಕಸದ ಟಿಪ್ಪರ್ಗಳ ಕೊರತೆಯಿಂದ ಇದೀಗ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ.
ನಗರಸಭೆಯಲ್ಲಿ ಸದ್ಯಕ್ಕೆ 119 ಪೌರ ಕಾರ್ವಿುಕರಿದ್ದಾರೆ. ಇದರಲ್ಲಿ 32 ಕಾಯಂ, 45 ನೇರ ಪಾವತಿ, 20 ಹೊರಗುತ್ತಿಗೆ, 16 ಲೋಡರ್ಸ್, 6 ಕ್ಲೀನರ್ಸ್ ಸೇರಿದ್ದಾರೆ. ಮಂಜೂರಾದ 6 ಆರೋಗ್ಯ ನಿರೀಕ್ಷಕರ ಪೈಕಿ ನಾಲ್ವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು 2010ರಲ್ಲಿ ಹಾವೇರಿ ನಗರಸಭೆಗೆ ಮಂಜೂರಾದ ಹುದ್ದೆಗಳ ಸಂಖ್ಯೆ. ನಂತರ ಈ ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಹೆಚ್ಚುತ್ತಿರುವ ನಗರದ ಜನಸಂಖ್ಯೆ, ಬೆಳವಣಿಗೆಗೆ ಅನುಗುಣವಾಗಿ ಪೌರ ಕಾರ್ವಿುಕರು ಹಾಗೂ ಇತರ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿ, ಭರ್ತಿ ಮಾಡುವ ಅನಿವಾರ್ಯತೆ ಇದೆ.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್ಗಳಿದ್ದು, ಸದ್ಯಕ್ಕೆ ಕೇವಲ 16 ಕಸದ ಟಿಪ್ಪರ್ಗಳಿವೆ. ವಾರ್ಡ್ಗೆ ಒಂದರಂತೆಯೂ ವಾಹನ ಸೌಲಭ್ಯವಿಲ್ಲ. ಇನ್ನು ಹೆಚ್ಚುವರಿಯಾಗಿ 30 ಪೌರ ಕಾರ್ವಿುಕರು ಹಾಗೂ 8 ವಾಹನಗಳ ಅವಶ್ಯಕತೆ ಇದೆ. ಖಾಲಿ ನಿವೇಶನಗಳಲ್ಲಿ ಕಸ ಎಸೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸ್ವಚ್ಛತೆ ಜತೆಗೆ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ನಗರದ ಜನತೆಯ ಆಶಯವಾಗಿದೆ.
ನಗರಸಭೆ ಸಿವಿಲ್ ವಿಭಾಗದ ಕಳಪೆ ನಿರ್ವಹಣೆಯಿಂದಾಗಿ ನಗರದ ಬಹುತೇಕ ಚರಂಡಿಗಳು ಹಾಳಾಗಿವೆ. ಸರಿಯಾಗಿ ನೀರು ಹರಿಯುವುದಿಲ್ಲ. ಸ್ವಚ್ಛಗೊಳಿಸಿದ ಎರಡೇ ದಿನಕ್ಕೆ ಮತ್ತೆ ಕಸ, ಕಳೆ ಕಟ್ಟುತ್ತದೆ. ಹಾಗಾಗಿ, ಪೌರ ಕಾರ್ವಿುಕರು ಹೈರಾಣಾಗಿದ್ದಾರೆ. ನಗರದ ಎಲ್ಲ ಚರಂಡಿಗಳನ್ನು ದುರಸ್ತಿಪಡಿಸಿ, ಸರಾಗವಾಗಿ ನೀರು ಹರಿಯುವಂತೆ ಮಾಡಬೇಕಿದೆ.
ಪೌರ ಕಾರ್ವಿುಕರು ಮತ್ತು ಟಿಪ್ಪರ್ಗಳ ಕೊರತೆಯಿಂದಾಗಿ ನಗರದ ಹಲವೆಡೆ ಎರಡು ದಿನಕ್ಕೊಮ್ಮೆ ಕಸ ಸಂಗ್ರಹಿಸಲಾಗುತ್ತಿದೆ. ಇರುವ ಸಿಬ್ಬಂದಿಗೆ ಒತ್ತಡ ಹೆಚ್ಚಾಗಿದೆ. ನಿತ್ಯವೂ ಒಂದೇ ಸಮಯಕ್ಕೆ ಸರಿಯಾಗಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಸಾಧ್ಯವಾಗದ ಕಾರಣ ಕೆಲ ಜನ ಖಾಲಿ ನಿವೇಶನ, ಚರಂಡಿಗಳಲ್ಲಿ ಕಸ ಎಸೆಯುತ್ತಿದ್ದಾರೆ. ಈ ಸಮಸ್ಯೆಯನ್ನು ನಗರಸಭೆ ಗಂಭೀರವಾಗಿ ಪರಿಗಣಿಸಬೇಕಿದೆ.
ಪೌರ ಕಾರ್ವಿುಕರ ಕೊರತೆಯಿಂದ ಹಲವೆಡೆ ಎರಡು ದಿನಕ್ಕೊಮ್ಮೆ ಕಸ ಸಂಗ್ರಹಿಸಲಾಗುತ್ತಿದೆ. ಪ್ರತಿದಿನ ಮನೆ ಮನೆಯಿಂದ ಕಸ ಸಂಗ್ರಹಿಸುವ ನಿಟ್ಟಿನಲ್ಲಿ ತಯಾರಿ ನಡೆಸಲಾಗಿದೆ. ಹೆಚ್ಚುವರಿ ಕಸದ ಟಿಪ್ಪರ್ಗಳು, ಹೆಚ್ಚುವರಿ ಪೌರ ಕಾರ್ವಿುಕರು ಲಭ್ಯವಾದರೆ ಸಮಸ್ಯೆ ಬಗೆಹರಿಯಲಿದೆ. | ಶಿವರಾಜ, ಪರಿಸರ ಇಂಜಿನಿಯರ್ ಹಾವೇರಿ ನಗರಸಭೆ