

ಹಗರಿಬೊಮ್ಮನಹಳ್ಳಿ: ಆರೆಸ್ಸೆಸ್‌ಗೆ ನೂರು ವರ್ಷ ತುಂಬಿದ ನಿಮಿತ್ತ ಪಟ್ಟಣದಲ್ಲಿ ಅ.5ರ ಮಧ್ಯಾಹ್ನ ಹಳೆಯ ಊರಿನ ಅಂಬಾಭವಾನಿ ದೇಗುಲದಿಂದ ಪಥಸಂಚಲನ ಆಯೋಜಿಸಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಳಿಕ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರಣ್ಯ ಸಭಾಮಂಟಪದಲ್ಲಿ ಕೊನೆಗೊಳ್ಳಲಿದೆ.
ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ದೂಪದಹಳ್ಳಿಯ ಕೆ.ಬಿ.ತಾಂಡದ ಶಿವಕುಮಾರ ಸ್ವಾಮೀಜಿ, ಸಂಘ ಪರಿವಾರದ ರಾಜ್ಯ ಉತ್ತರ ಪ್ರಾಂತದ ಪ್ರಮುಖ ಶ್ರೀನಿವಾಸ ಜಿ ನಾಯಕ ಪಾಲ್ಗೊಳ್ಳಲಿದ್ದಾರೆ ಎಂದು ಸಂಚಾಲಕರಾದ ರೊಟ್ಟಿ ಕೊಟ್ರಪ್ಪ ಮತ್ತು ಸೋಮನಗೌಡ್ರು ತಿಳಿಸಿದ್ದಾರೆ.
ತಾಲೂಕಿನ ಹಂಪಾಪಟ್ಟಣದಿಂದ ಆರೆಸ್ಸೆಸ್ ಆರಂಭವಾಗಿತ್ತು. 90ನೇ ವಯಸ್ಸಿನ ಕರಂಶೆಟ್ಟಿ ಜವಳಿ ಸತ್ಯನಾರಾಯಣ ಶೆಟ್ಟಿ ಅವರು ಅಂದಿನ ಸಂಘಟನೆ ಮೆಲುಕನ್ನು ಹಾಕಿದ್ದಾರೆ. 1954ರಲ್ಲಿ ಹೊಸಪೇಟೆಯಿಂದ ಕಮಲಕರಭಟ್ ವಾರಕ್ಕೊಮ್ಮೆ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಯುವಕರನ್ನು ಸಂಘಟಿಸುವ ಮೂಲಕ, ಅವರಿಗೆ ದೇಶಾಭಿಮಾನ, ಸಂಘ, ಪರಿವಾರ, ಶಿಸ್ತುಗಳ ಬಗ್ಗೆ ವಿವರಿಸುತ್ತಿದ್ದರು.
ನನ್ನೊಂದಿಗೆ ಸಹೋದರ ವೆಂಕಟೇಶ ಶೆಟ್ಟಿ, ಸ್ನೇಹಿತರಾದ ಆರ್.ಲಕ್ಷ್ಮೀನಾರಾಯಣ, ಕೃಷ್ಣವರ್ಧನ, ಮಲ್ಲಿಕಾರ್ಜುನ ಶೆಟ್ಟಿ .. ಹೀಗೆ ಹತ್ತು-ಹದಿನೈದು ಜನರಿಂದ ಆರಂಭವಾದ ಸಂಘಟನೆ ಬೆಳೆಯುತ್ತ ಹೊರಟಿತು. ನನ್ನ ತಾಯಿ ಲಕ್ಷ್ಮಮ್ಮ ರಂಗಯ್ಯ ಶೆಟ್ಟಿ ಕೂಡ ಸಾಥ್ ನೀಡುತ್ತಿದ್ದರು. ನನ್ನ ತಮ್ಮನ ಪತ್ನಿ ಸುವರ್ಣಮ್ಮ ವೆಂಕಟೇಶರ ಮನೆ ಶೋಧಿಸಲು ಬೆಂಗಳೂರಿನಿಂದ ಆಗಮಿಸಿದ್ದ ಪೊಲೀಸರಿಗೆ ಸರಿಯಾಗಿ ಉತ್ತರ ನೀಡಿ ಬಾಗಿಲಲ್ಲೇ ಗಂಟೆಗಳ ಕಾಲ ನಿಲ್ಲಿಸಿದ್ದರು. ತುರ್ತು ಪರಿಸ್ಥಿತಿಯಲ್ಲಿ ಮಗಿಮಾವಿನಹಳ್ಳಿಯ ವೆಂಕಟೇಶ ಬಂಧನಕ್ಕೊಳಗಾಗಿದ್ದರು. ನಂತರ ಗ್ರಾಮದಿಂದ ಪಟ್ಟಣಕ್ಕೆ ಸಂಘಟನೆ ವರ್ಗಗೊಂಡಿತು ಎಂದು ಸ್ಮರಿಸಿತ್ತಾರೆ.
ಪಟ್ಟಣದಲ್ಲಿ ಅಶ್ವತ್ಥನಾರಾಯಣ ಶಿಬಿರಗಳನ್ನು ನಡೆಸುತ್ತಿದ್ದರು. ಪೆಂಡಕೂರು ಗುರುಮೂರ್ತಿ, ಡಾ.ಎಚ್.ಎನ್.ಪಿ..ವಿಠಲ್, ನಂದಿಬಂಡಿ ವೀರಣ್ಣ, ಚಿದ್ರಿ ವಿಶ್ವನಾಥ ಅವರಿಂದ ಸಂಘಟನೆ ಬಲಗೊಂಡಿತು. ತಾಲೂಕಿನಲ್ಲಿ 70 ವರ್ಷಕ್ಕೂ ಹೆಚ್ಚು ಕಾಲ ಉರುಳಿದೆ. ಆಗಲೇ ಪಟ್ಟಣದಲ್ಲಿ ಸೇವಾ ಭಾರತಿ ಟ್ರಸ್ಟ್ ಎನ್ನುವ ಹೆಸರಿನಲ್ಲಿ ಶಾಲೆ ಆರಂಭವಾಗಿತ್ತು. ಅದರ ನಿರ್ವಹಣೆ ಆರೆಸ್ಸೆಸ್‌ಗೆ ವಹಿಸಿಲಾಗಿತ್ತು. ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರವು ಬೃಹತ್ತಾಗಿ ಬೆಳೆದಿದೆ. ಡಾ.ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ ಪಟ್ಟಣಕ್ಕೆ ಭೇಟಿ ಕೊಟ್ಟಿದ್ದಾರೆ. ಸಂಘಟನೆಯಿಂದ ಜೀವನದಲ್ಲಿ ಶಿಸ್ತು ಸಾಧ್ಯ ಎನ್ನುತ್ತಾರೆ ಶಿಬಿರಾರ್ಥಿ ಎ.ಶ್ರೀನಿವಾಸ ಮತ್ತು ಗುಳೆದಾಳ್ ಶ್ರೀನಿವಾಸ.