ಗುಂಡ್ಲುಪೇಟೆ ತಾಲೂಕಿನಲ್ಲಿ ಹೆಚ್ಚುತ್ತಿದೆ ನೆರೆ ರಾಜ್ಯದವರ ಹಾವಳಿ

22-GPT-1
ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಟಿ.ರಮೇಶ್ ಬಾಬು ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ ನಡೆಯಿತು. ಮುಖ್ಯಾಧಿಕಾರಿ ವಸಂತಕುಮಾರಿ, ಬಿಇಒ ಸ್ವಾಮಿ ಇದ್ದರು.
Published on

 ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನೆರೆರಾಜ್ಯಗಳವರ ಹಾವಳಿ ಹೆಚ್ಚಾಗುತ್ತಿದ್ದರೂ ತಾಲೂಕು ಆಡಳಿತ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂದು ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ಆಕ್ರೋಶ ವ್ಯಕ್ತವಾಯಿತು.

ಪೂರ್ವಭಾವಿ ಸಭೆಯಲ್ಲಿ ಯಾವುದೇ ಇಲಾಖೆ ಅಧಿಕಾರಿಗಳೂ ಭಾಗವಹಿಸುತ್ತಿಲ್ಲ. ತಾಲೂಕು ಆಡಳಿತ ನೆಪಮಾತ್ರಕ್ಕೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದೆ. ಕೇರಳದ ರಸ್ತೆ ಹಾಗೂ ಪಟ್ಟಣದ ಎಲ್ಲ ಹೆದ್ದಾರಿ ಬದಿಗಳಲ್ಲಿ ಕೇರಳೀಯರು ಅನಧಿಕೃತವಾಗಿ ಅಂಗಡಿಗಳನ್ನು ತೆರೆದು ವಹಿವಾಟು ನಡೆಸುತ್ತಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕನ್ನಡ ಭಾಷೆಯನ್ನು ಬಳಕೆ ಮಾಡದೆ ನಾಮಫಲಕ ಹಾಕುತ್ತಿದ್ದರೂ ಪುರಸಭೆಯವರು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಕಿಡಿಕಾರಿದರು.

ಪ್ರತಿ ದಿನವೂ ತ್ಯಾಜ್ಯಗಳನ್ನು ನಾನಾ ರೀತಿಯಲ್ಲಿ ತರುತ್ತಿದ್ದರೂ ತಡೆಗಟ್ಟುವ ಕೆಲಸ ಆಗುತ್ತಿಲ್ಲ. ಪುರಸಭೆಯ ಘನತ್ಯಾಜ್ಯ ಘಟಕದ ಬಳಿಯೇ ಅಕ್ರಮವಾಗಿ ಸತ್ತ ಜಾನುವಾರುಗಳ ಮಾಂಸ, ಚರ್ಮ, ಮೂಳೆ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರೂ ತಾಲೂಕು ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ. ದಂಧೆಯಲ್ಲಿ ತೊಡಗಿಸಿಕೊಂಡವರನ್ನು ಬಂಧಿಸಿಲ್ಲ. ಇದೇ ರೀತಿ ನಡೆದರೆ ಮುಂದಿನ ದಿನಗಳಲ್ಲಿ ತಾಲೂಕಿನ ಕನ್ನಡಿಗರು ಅಪಾಯಕ್ಕೆ ಸಿಲುಕುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಾರಿ ಎಲ್ಲ ಇಲಾಖೆ ಅಧಿಕಾರಿಗಳೂ ಸೇರಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಾಧಿಕಾರಿ ವಸಂತಕುಮಾರಿ, ಬಿಇಒ ಸ್ವಾಮಿ, ಕನ್ನಡ ಸಂಘಟನೆ ಪದಾಧಿಕಾರಿಗಳಾದ ಬ್ರಹ್ಮಾನಂದ, ಅಬ್ದುಲ್ ಮಾಲೀಕ್, ಮುಬಾರಕ್, ರಮೇಶ್ ನಾಯಕ್, ರಾಜೇಂದ್ರ, ಸುರೇಶ್ ನಾಯಕ್, ಮಹೇಶ್, ಮುನೀರ್ ಪಾಶಾ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net