

ಚಿಕ್ಕೋಡಿ: ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗುಂಪು ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಎ.ಎ.ಪಾಟೀಲ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಲ್.ಎಸ್.ಪಡ್ತಾರೆ ಹೇಳಿದರು.
ಇಲ್ಲಿನ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಿಸುವಲ್ಲಿ ಎಲ್ಲ ಪಾಲುದಾರರ ಪಾತ್ರಗಳು’ ವಿಷಯದ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸಬೇಕು. ಶಿಕ್ಷಕರಲ್ಲಿ ನೈತಿಕ ಮೌಲ್ಯ ಕುಸಿಯುತ್ತಿರುವುದು ಕಳವಳಕಾರಿ ಎಂದರು.
ಹುಕ್ಕೇರಿ ಎಸ್.ಕೆ.ಪಬ್ಲಿಕ್ ಇಂಟರ್‌ರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಶಿಕ್ಷಕರು ಬೋಧನಾ ಸಾಮಗ್ರಿ ಬಳಸಿ ಪಾಠ ಮಾಡಬೇಕು ಎಂದರು.
ಡಾ.ಕನಕಾಚಲ ಕನಕಗಿರಿ ಮಾತನಾಡಿದರು. ಡಾ.ಎನ್.ಎಸ್.ಶಿಂಧೆ ಸ್ವಾಗತಿಸಿದರು. ಎಂ.ಎಚ್.ಪ್ರೊಫೆಸರ್, ಇಂದಿರಾ ಮೈತ್ರಿ ಇತರರಿದ್ದರು. ಶ್ರುತಿ ಬತ್ತೆ ಮತ್ತು ಭಾಗ್ಯಶ್ರೀ ರೇವಡಿಗಾರ ನಿರೂಪಿಸಿದರು. ಪ್ರಾಧ್ಯಾಪಕ ಎಸ್.ಎಂ.ಚಂದ್ಗಡೆ ವಂದಿಸಿದರು.