ಮನೆ ಎದುರೇ ಬಾಲಕಿ ಅಪಹರಣಕ್ಕೆ ಯತ್ನ

kidnap
Published on

ಮಾನ್ವಿ: ಶಾಲಾವಧಿ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳನ್ನು ಆರು ಜನ ಕಿಡಿಗೇಡಿಗಳು ಆಕೆಯ ಮನೆಯ ಬಳಿಯೇ ಅಪಹರಣಕ್ಕೆ ಯತ್ನಿಸಿ, ವಿಫಲವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಡಿ.14 ರಂದು ಈ ಘಟನೆ ನಡೆದಿದೆ. ಎಂದಿನಂತೆ ಶಾಲೆ ಮುಗಿಸಿಕೊಂಡು ಬ್ಯಾಗವಾಟ್ ಕ್ರಾಸ್ ಬಳಿ ಇರುವ ತಮ್ಮ ಮನೆಗೆ ಸಾರಿಗೆ ಬಸ್‌ನಲ್ಲಿ ಬಂದಿಳಿದ ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬಳನ್ನು ಮಾಸ್ಕ್ ಧರಿಸಿಕೊಂಡಿದ್ದ ಆರು ಜನ ಆಗಂತುಕರು ಅಪಹರಣ ಮಾಡಲು ಯತ್ನಿಸಿದ್ದಾರೆ. ಕೂಡಲೇ ಇಬ್ಬರೂ ವಿದ್ಯಾರ್ಥಿನಿಯರು ಜೋರಾಗಿ ಕಿರುಚಿಕೊಂಡಿದ್ದಾರೆ. ಮಗಳ ಚೀರಾಟ ಕೇಳಿ ತಕ್ಷಣ ಹೊರಗೆ ಬಂದ ವಿದ್ಯಾರ್ಥಿನಿಯ ತಂದೆ ಅಪರಿಚಿತರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಆತನನ್ನು ಜೋರಾಗಿ ತಳ್ಳಿ, ಹೊಡೆಯಲು ಮುಂದಾಗಿದ್ದಾರೆ. ಇದೇ ವೇಳೆ ಕವಿತಾಳ ಕಡೆಯಿಂದ ಸಾರಿಗೆ ಬಸ್ಸೊಂದು ಬರುತ್ತಿರುವುದನ್ನು ಕಂಡು ಅಪಹರಣಕಾರರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯ ತಂದೆ ಅಪಹರಣಕಾರರ ಬೈಕ್‌ನ ಫೋಟೊ ತೆಗೆದುಕೊಂಡಿದ್ದು, ಮಾನ್ವಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಕರೇಗುಡ್ಡ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯ ಅಪಹರಣದ ಯತ್ನದ ಬಗ್ಗೆ ಆಕೆಯ ತಂದೆ ನಮಗೆ ಮಾಹಿತಿ ನೀಡಿದ್ದಾರೆ. ಆರು ಜನರು ಬೈಕ್ ಮೇಲೆ ಬಂದಿದ್ದು, ಆ ವಾಹನದ ಫೋಟೋ ಕ್ಲಿಕ್ಕಿಸಿದ್ದಾರೆ. ವಿಚಾರಣೆ ನಡೆಸಿ, ಆದಷ್ಟು ಬೇಗ ಆಗಂತುಕರನ್ನು ಪತ್ತೆ ಮಾಡಲಾಗುವುದು.| ಮಹಾದೇವಪ್ಪ, ಪಿಐ, ಪೊಲೀಸ್ ಠಾಣೆ, ಮಾನ್ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net