ನಾಲ್ಕು ತಾಂಡಾಗಳಲ್ಲಿ ಹೆಚ್ಚಿದ ಜ್ವರ ಪ್ರಕರಣಗಳು

mdl Dengue
ಸಿಂಧನೂರ ಸರ್ಕಾರಿ ಆಸ್ಪತ್ರೆಯಲ್ಲಿ ಕಸ್ತೂರಿ ತಾಂಡಾದ ನಿವಾಸಿಗಳು ಚಿಕಿತ್ಸೆ ಪಡೆಯುತ್ತಿರುವುದು.
Published on

ಮುದಗಲ್: ಸಮೀಪದ ದೇಸಾಯಿ ಭೋಗಾಪುರ ತಾಂಡಾ, ಕಿಲಾರಹಟ್ಟಿ ತಾಂಡಾದಲ್ಲಿ ಕಳೆದ 15 ದಿನಗಳಿಂದ ಜನರು ವಿಪರೀತ ಜ್ವರದಿಂದ ಬಳಲುತ್ತಿದ್ದಾರೆ. ಪ್ರತಿ ಮನೆಯಲ್ಲಿ ಮೂರ‌್ನಾಲ್ಕು ಜನ ಜ್ವರದಿಂದ ನರಳುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಎರಡು ತಾಂಡಾದಲ್ಲಿ ಮೊದಲಿಗೆ ಮೂರ‌್ನಾಲ್ಕು ಜನರಿಗೆ ಜ್ವರ ಕಾಣಿಸಿಕೊಂಡಿತ್ತು. ಬಳಿಕ ದಿನೇದಿನೆ ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಿದ್ದು, ಈಗಾಗಲೇ 70ಕ್ಕೂ ಹೆಚ್ಚು ಜನ ಮಸ್ಕಿ, ಮುದಗಲ್, ಸಿಂಧನೂರು, ರಾಯಚೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಇದೀಗ ಕಸ್ತೂರಿ ತಾಂಡಾ ಮತ್ತು ಪಾಪಣ್ಣನ ತಾಂಡಾದ ಜನರೂ ತೀವ್ರ ಜ್ವರಕ್ಕೆ ತುತ್ತಾಗುತ್ತಿದ್ದಾರೆ. ದೂರದ ಸಿಂಧನೂರು, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾರ, ಹತ್ತು ದಿನ ಕಳೆದರೂ ಜ್ವರ ಕಡಿಮೆಯಾಗದ ಕಾರಣ ಡೆಂೆ ರೋಗ ಇರಬಹುದೆಂದು ಭಯಗೊಂಡಿದ್ದು, ತಾಂಡಾಗಳಲ್ಲಿ ಗ್ರಾಪಂನಿಂದ ಶುದ್ಧ ನೀರು ಪೂರೈಸುತ್ತಿಲ್ಲ, ಸ್ವಚ್ಛತೆ ಕಾಪಾಡದ ಕಾರಣ ಸೊಳ್ಳೆಗಳ ಉಪಟಳ ಹೆಚ್ಚಾಗಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಲು ಕಾರಣ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳ ಭೇಟಿ: ತಾಂಡಾಗಳಲ್ಲಿ ಜ್ವರ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಜನರನ್ನು ತಪಾಸಣೆಗೆ ಒಳಪಡಿಸಿ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ.

ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಲಾರ್ವಾ ಸರ್ವೇ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮನೆ ಸುತ್ತಲಿನಲ್ಲಿ ಸ್ವಚ್ಛತೆ ಮತ್ತು ನೀರು ಸಂಗ್ರಹ ಮಾಡಲಾದ ವಸ್ತುಗಳನ್ನು ಮುಚ್ಚುವಂತೆ ಸಲಹೆ ನೀಡಲಾಗುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು ತಿಳಿಸಲಾಗಿದೆ ಎಂದು ದೇಸಾಯಿ ಭೋಗಾಪುರ ಉಪ ಆರೋಗ್ಯ ಕೇಂದ್ರದ ಅಧಿಕಾರಿ ಲೋಕೇಶ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net