ಪರೀಕ್ಷೆಯಲ್ಲಿ ಉತ್ತರ ತೋರಿಸದ್ದಕ್ಕೆ ಹಲ್ಲೆ

FotoJet (2)
Published on

ಪರೀಕ್ಷಾ ಕೊಠಡಿಯಿಂದ ಹೊರಬಂದ ನಂತರ ಗುಂಪು ಕಟ್ಟಿಕೊಂಡು ಗಲಾಟೆ ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ

ಚಿಂತಾಮಣಿ: ಪರೀಕ್ಷೆಯಲ್ಲಿ ಉತ್ತರ ತೋರಿಸಲಿಲ್ಲ ಎಂದು ವಿದ್ಯಾರ್ಥಿ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಿಕಿಗೆ ಬಂದಿದೆ.

ಚೇಳೂರಿನ ಮಂಜುನಾಥ್ (21) ಹಲ್ಲೆಗೊಳಗಾದ ಯುವಕ. ಚಿಂತಾಮಣಿ ಶಾಂತಿನಗರದ ನಂದೀಶ್ ಮತ್ತು ಗೆಳೆಯರು ಹಲ್ಲೆ ನಡೆಸಿದವರು ಎನ್ನಲಾಗಿದೆ.

ಡಿ.26ರಂದು ನಗರದ ಖಾಸಗಿ ಕಾಲೇಜಿನಲ್ಲಿ ಫೈನಾನ್ಷಿಯಲ್ ಅಕೌಂಟಿಂಗ್ ಪರೀಕ್ಷೆ ಬರೆಯುವ ವೇಳೆ ಪರೀಕ್ಷಾ ಕೊಠಡಿಯಲ್ಲಿ ಹಿಂದೆ ಕುಳಿತಿದ್ದ ನಂದೀಶ್ ಉತ್ತರ ತೋರಿಸುವಂತೆ ಒತ್ತಾಯಿಸುತ್ತಿದ್ದ. ಆದರೆ, ಇದಕ್ಕೆ ಮಂಜುನಾಥ್ ನಿರಾಕರಿಸಿದ್ದ ಎನ್ನಲಾಗಿದೆ. ಪರೀಕ್ಷೆ ನಂತರ ಸ್ನೇಹಿತ ಅಭಿಲಾಷ್ ಜತೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ, ಮತ್ತೊಂದು ಬೈಕ್‌ನಲ್ಲಿ ಬಂದ ನಂದೀಶ್ ಹಾಗೂ ಮತ್ತಿಬ್ಬರು ಕನ್ನಂಪಲ್ಲಿ ಸರ್ಕಲ್‌ನಲ್ಲಿ ತಡೆದು ನಿಂದಿಸಿದ್ದಲ್ಲದೆ, ಪೋನ್ ಮಾಡಿ 10-15 ಮಂದಿಯನ್ನು ಸ್ಥಳಕ್ಕೆ ಕರೆಸಿ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಬಂದ ಅಭಿಲಾಷ್ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಘಟನೆ ಬಗ್ಗೆ ಗಾಯಾಳು ತಂದೆಗೆ ವಿಷಯ ತಿಳಿಸಿದ್ದು, ಈ ವೇಳೆ ನೆರವಿಗೆ ಬಂದ ಶಂಕರ ಅವರನ್ನೂ ಅವಾಚ್ಯವಾಗಿ ನಿಂದಿಸಿ, ರಾಡ್‌ನಿಂದ ಹಲ್ಲೆ ನಡೆಸಿದ್ದು, ಗಲಾಟೆಯಲ್ಲಿ ಶಂಕರ ಅವರ ಕತ್ತಿನಲ್ಲಿದ್ದ ಚಿನ್ನದ ಚೈನ್ ನಾಪತ್ತೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಂಜುನಾಥ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಾಯಾಳುಗಳು ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net