ಪ್ರತಿ ಗ್ರಾಮದಲ್ಲಿ ಇ-ಸ್ವತ್ತು ಅಭಿಯಾನ ಆರಂಭಿಸಿ

Hadagali janaspandana
ಹೂವಿನಹಡಗಲಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಶಾಸಕ ಕೃಷ್ಣನಾಯ್ಕ ಉದ್ಘಾಟಿಸಿದರು. ಡಿಸಿ ಎಂ.ಎಸ್.ದಿವಾಕರ, ಜಿಪಂ ಸಿಇಒ ಸದಾಶಿವ ಪ್ರಭು, ತಾಪಂ ಇಒ ಉಮೇಶ್ ಮೈನಹಳ್ಳಿ, ತಹಸೀಲ್ದಾರ್ ಅಮರೇಶ ಇತರರಿದ್ದರು.
Published on

ಹೂವಿನಹಡಗಲಿ: ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ಇ-ಸ್ವತ್ತು ತಲುಪಿಸಲು ಅಭಿಯಾನ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿ ಎಂ.ಎಸ್.ದಿವಾಕರ ತಿಳಿಸಿದರು.

ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲೂಕಿನ ಗ್ರಾಮಗಳಲ್ಲಿ ಇ-ಸ್ವತ್ತು ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಹೀಗಾಗಿ ಪ್ರತಿ ಗ್ರಾಮದಲ್ಲಿ ಇ-ಸ್ವತ್ತು ಅಭಿಯಾನ ಆರಂಭಿಸಿ ಮನೆ ಬಾಗಿಲಿಗೆ ತಲುಪಿಸಲು ಸೂಚಿಸಲಾಗಿದೆ. ತಾಲೂಕಿನಲ್ಲಿ ರೈತರ ಭೂಮಿಗಳಲ್ಲಿ ನಕ್ಷೆ ಪ್ರಕಾರ ಅಳತೆ ಮಾಡಿ ವಿಸ್ತೀರ್ಣ ಗೊತ್ತು ಮಾಡುವಂತೆ ರೈತರು ಮನವಿ ನೀಡಿದ್ದು, ಕ್ರಮಕೈಗೊಳ್ಳಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯ ಹಿನ್ನೀರಿನಲ್ಲಿ ಸುಮಾರು 61 ಎಕರೆ ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದು, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ 15 ದಿನದೊಳಗಾಗಿ ವರದಿ ನೀಡಲು ಸೂಚಿಸಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೃಷ್ಣನಾಯ್ಕ ಮಾತನಾಡಿ, ಜಿಲ್ಲಾಡಳಿತ ಜನರ ಬಳಿಗೆ ಬಂದು ಸಮಸ್ಯೆ ಆಲಿಸುತ್ತಿರುವುದು ಒಳ್ಳೆಯ ಕಾರ್ಯ. ಪ್ರಚಾರದ ಕೊರತೆಯಿಂದ ಕಡಿಮೆ ಜನ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಪ್ರಚಾರ ನಡೆಸಿ ಈ ಕಾರ್ಯಕ್ರಮಕ್ಕೆ ಹೊಸ ರೂಪ ನೀಡಲಾಗುವುದು ಎಂದರು.

ಜಿಪಂ ಸಿಇಒ ಸದಾಶಿವ ಪ್ರಭು, ಎಸಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಅಮರೇಶ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತಾಪಂ ಇಒ ಉಮೇಶ್ ಮೈನಹಳ್ಳಿ ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.

ಡಾ.ಅಂಬೇಡ್ಕರ್ ಪ್ರತಿಮೆ ಬಂಧ ಮುಕ್ತಗೊಳಿಸಿ: ಲಿ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿರುವ ಪ್ರತಿಮೆ ಸುತ್ತಲೂ ಕಬ್ಬಿಣದ ಸಲಾಕೆಗಳಿಂದ ರಕ್ಷ ಕವಚ ನಿರ್ಮಿಸಿ, ಪ್ರತಿಮೆಯನ್ನು ಗಾಜಿನಿಂದ ಮುಚ್ಚಲಾಗಿದೆ. ಇದನ್ನು ತೆರವುಗೊಳಿಸಿ ಹೊಸ ಮೂರ್ತಿ ನಿರ್ಮಾಣ ಮಾಡಬೇಕೆಂದು ಡಿಸಿಗೆ ದಲಿತ ಸೇನೆಯಿಂದ ಮನವಿ ಸಲ್ಲಿಸಲಾಯಿತು.

101 ಅರ್ಜಿ ಸ್ವೀಕಾರ: ಜನಸ್ಪಂದನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ 58, ತಾಪಂ 9, ಪುರಸಭೆ 7, ಭೂಮಾಪನಾ ಇಲಾಖೆ 4, ಸಮಾಜ ಕಲ್ಯಾಣ, ಸಾರಿಗೆ, ಜೆಸ್ಕಾಂ, ಬಿಸಿಎಂ, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ತಲಾ 3, ಅಲ್ಪಸಂಖ್ಯಾತರ ಇಲಾಖೆ 2, ಪೊಲೀಸ್, ಕೃಷಿ, ಶಿಕ್ಷಣ, ಆರೋಗ್ಯ, ಪಿಡಬ್ಲುೃಡಿ, ಆರ್‌ಬ್ಲುೃಎಸ್ ಇಲಾಖೆಗಳಿಗೆ ತಲಾ ಒಂದು ಅರ್ಜಿ ಸಲ್ಲಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net