ಆರ್ಥಿಕತೆಯಲ್ಲಿ ಅಭಿವೃದ್ಧಿ ಸಾಧಿಸಲು ಮುಂದಾಗಿ: ಸಂಯುಕ್ತ ಸಹಕಾರಿ ನಿರ್ದೇಶಕ ಜಿ.ಶ್ರೀಧರ ಸಲಹೆ

kpl
ಕೊಪ್ಪಳದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಹಮ್ಮಿಕೊಂಡಿದ್ದ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಶರಣಬಸಪ್ಪ ಉದ್ಘಾಟಿಸಿದರು
Published on

ಕೊಪ್ಪಳ: ಪ್ರತಿಯೊಂದು ಸಹಕಾರಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಣಕಾಸಿನ ಕಠಿಣ ಸಮಸ್ಯೆ ಎದುರಿಸಿ ಆರ್ಥಿಕತೆ ಅಭಿವೃದ್ಧಿ ಸಾಧಿಸಲು ಮುಂದಾಗಬೇಕು ಎಂದು ಸಂಯುಕ್ತ ಸಹಕಾರಿ ನಿರ್ದೇಶಕ ಜಿ.ಶ್ರೀಧರ ಸಲಹೆ ನೀಡಿದರು.

ಸಿಇಒಗಳು ಕಠಿಣ ಸಮಸ್ಯೆ ಎದುರಿಸಿ ಯಶಸ್ವಿಯಾಗಿ ಸಂಸ್ಥೆ ಮುನ್ನಡೆಸಿ

ನಗರದ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಕಲಬುರ್ಗಿ ಪ್ರಾದೇಶಿಕ ಕಚೇರಿಯಿಂದ ಸಿಇಒಗಳಿಗೆ ಶನಿವಾರ ಹಮ್ಮಿಕೊಂಡಿದ್ದ ವಿಷಯಾಧಾರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮುದ್ರದಲ್ಲಿ ಹಡಗು ಚಲಾಯಿಸುವುದು ಸುಲಭದ ಕೆಲಸವಲ್ಲ. ವಾತಾವರಣದ ಏರುಪೇರುಗಳನ್ನು ಎದುರಿಸಿ ನಮ್ಮ ಗುರಿ ತಲುಪಬೇಕು. ಅದರಂತೆ ನಾವೆಲ್ಲ ಹಣಕಾಸಿನ ಚಟುವಟಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಹಕಾರಿಯ ಸಿಇಒಗಳು ಕಠಿಣ ಸಮಸ್ಯೆ ಎದುರಿಸಿ ಯಶಸ್ವಿಯಾಗಿ ಸಂಸ್ಥೆ ಮುನ್ನಡೆಸಲು ಸನ್ನದ್ಧರಾಗಬೇಕು ಎಂದರು.
ಎಲ್ಲ ಸಿಇಒಗಳು ಉತ್ತಮವಾಗಿ ತರಬೇತಿ ಪಡೆಯಿರಿ. ಯಾವುದೇ ಗೊಂದಲಗಳಿದ್ದಲ್ಲಿ ನಿವಾರಿಸಿಕೊಳ್ಳಬೇಕು. ಇದರಿಂದ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ತೋರಲು ಅನುಕೂಲವಾಗಲಿದೆ ಎಂದು ತಿಳೀಸಿದರು.


ಚುನಾವಣೆ ಪೂರ್ವ ಸಿದ್ಧತೆ ಕುರಿತು ಲಿಯಾಕತ್ ಅಲಿ, ಸಾಮಾನ್ಯ ಸಭೆ ಪೂರ್ವಸಿದ್ಧತೆ ಕುರಿತು ಸೂರ್ಯಕಾಂತ್, ಮಾನಸಿಕ ಒತ್ತಡ ನಿರ್ವಹಣೆ ಕುರಿತು ಡಾ.ಕೇದಾರೇಶ್ವರ ಉಪನ್ಯಾಸ ನೀಡಿದರು. ಸಹಕಾರ ಸಂಘಗಳ ಇಲಾಖೆ ಸಹಾಯಕ ನಿಬಂಧಕ ಶರಣಬಸಪ್ಪ, ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಉಪಾಧ್ಯಕ್ಷ ಶಂಕರಗೌಡ ಹಿರೇಗೌಡರ್, ನಿರ್ದೇಶಕರಾದ ಚನ್ನಬಸಪ್ಪ ಕಡ್ಡಿಪುಡಿ, ಗುರುರಾಜ್ ಬಿಸರಳ್ಳಿ, ಪ್ರಾಣೇಶ ದೇಸಾಯಿ, ಸಂಯುಕ್ತ ಸಹಕಾರಿಯ ಜಿಲ್ಲಾ ಸಂಯೋಜಕ ಓಂಕಾರ ಧರಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net