ಮೈಸೂರು ದಕ್ಷಿಣ ವಲಯ ಬಿಇಒ ಕಚೇರಿಯಿಂದ ಕಲಿಕಾಮೃತ ತರಬೇತಿ

mysore
Published on

ಅವಿನಾಶ್ ಜೈನಹಳ್ಳಿ ಮೈಸೂರು

ಓದಿನಲ್ಲಿ ಹಿಂದುಳಿದಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ಸಂಭವವಿರುವ ವಿದ್ಯಾರ್ಥಿಗಳಿಗೆ ಮೈಸೂರು ದಕ್ಷಿಣ ವಲಯ ಬಿಇಒ ಕಚೇರಿಯಿಂದ ‘ಕಲಿಕಾಮೃತ’ ಎಂಬ ವಿನೂತನ ತರಬೇತಿ ತರಗತಿ ಆರಂಭಿಸಲು ಯೋಜನೆ ಸಿದ್ಧಗೊಂಡಿದೆ.

ಫೆ.17ರಿಂದ ಫೆ.22ರದವರೆಗೆ ಈ ತರಗತಿಗಳನ್ನು ನಡೆಸಲಾಗುತ್ತದೆ. ಬೆಳಗ್ಗೆ 9ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಶೇಷ ನುರಿತ ಸಂಪನ್ಮೂಲ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ವಿಷಯಗಳ ಬೋಧನೆ ಮಾಡಲಾಗುತ್ತದೆ. ದಕ್ಷಿಣ ವಲಯ ಬಿಇಒ ಕಚೇರಿಯ ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ಹತ್ತಿರವಿರುವ ಹಾರ್ಡ್ವಿಕ್ ಪ್ರೌಢಶಾಲೆ, ಜ್ಞಾನಗಂಗಾ ಪ್ರೌಢಶಾಲೆ, ಕನಕಗಿರಿ ಸರ್ಕಾರಿ ಪ್ರೌಢಶಾಲೆಯಲ್ಲಿ ತರಬೇತಿ ತರಗತಿ ನಡೆಯುತ್ತದೆ. ಪ್ರತಿ ಕೇಂದ್ರಕ್ಕೂ ತಲಾ 160 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆ ವಿಧಾನ:

ಈ ಬಾರಿ ದಕ್ಷಿಣ ವಲಯದಲ್ಲಿ 77 ಪ್ರೌಢಶಾಲೆಯಿಂದ 4,653 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿದ್ದಾರೆ. ಇವರು ಇತ್ತೀಚೆಗೆ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಒಂದಕ್ಕಿಂತ ಹೆಚ್ಚು ವಿಷಯಗಳಲ್ಲಿ ಹಾಗೂ ಐದಕ್ಕಿಂತ ಕಡಿಮೆ ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ತರಬೇತಿ ತರಗತಿಗೆ ಆಯ್ಕೆ ಮಾಡಲಾಗಿದೆ. ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 484 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿರುವುದು ಕಂಡುಬಂದಿದ್ದು, ಈ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ನುರಿತ ಸಂಪನ್ಮೂಲ ಶಿಕ್ಷಕರಿಂದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ಕನಿಷ್ಠ ತೇರ್ಗಡೆಯಾಗುವ ಮಟ್ಟಿಗೆ ಬೋಧನೆ ಮತ್ತು ಸುಲಭವಾಗಿ ಅಂಕಗಳಿಸುವ ವಿಧಾನ ಸತತವಾಗಿ ಬೋಧಿಸಲಾಗುತ್ತದೆ.

ತರಬೇತಿ ಹೇಗೆ?:

ತರಬೇತಿ ತರಗತಿಯಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಭಯವಿಲ್ಲದೆ ಎದುರಿಸುವುದು ಹೇಗೆ? ಗೊಂದಲ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಎನ್ನುವ ವಿಚಾರಗಳ ಬಗ್ಗೆ ಪ್ರಾಥಮಿಕ ತಿಳಿವಳಿಕೆ ನೀಡುತ್ತಾರೆ. ಅಲ್ಲದೆ ತಮ್ಮ ವಿಷಯಗಳಲ್ಲಿ ಯಾವ ರೀತಿ ಪ್ರಶ್ನೆಗಳಿಗೆ ಹೇಗೆ? ಉತ್ತರವನ್ನು ಬರೆಯಬೇಕು ಎನ್ನುವ ವಿಧಾನ ಹೇಳಿಕೊಡುತ್ತಾರೆ. ಇದರೊಂದಿಗೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅವಲೋಕನ ಮಾಡಿ, ಪುನರಾರ್ವತನೆಯಾಗಿರುವ ಪ್ರಶ್ನೆಗಳನ್ನು ಗಮನಿಸಿ ಅವುಗಳ ಮೇಲೆ ಒತ್ತು ನೀಡಿ ಕಲಿಸಲಾಗುತ್ತದೆ. ಗಣಿತ, ವಿಜ್ಞಾನ ಮತ್ತು ಆಂಗ್ಲ ಭಾಷೆಯ ತರಗತಿಗಳನ್ನು ಹೆಚ್ಚಾಗಿ ನಿರ್ವಹಿಸಲಾಗುತ್ತದೆ. ಏಕೆಂದರೆ ಈ ವಿಷಯಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಸಂಭವವಿರುವುದರಿಂದ, ಇವುಗಳಿಗೆೆ ಹೆಚ್ಚಿನ ಒತ್ತು ನೀಡಿ ಕಲಿಸಲಾಗುತ್ತದೆ.

ಪ್ರತಿದಿನವೂ ಒಂದು ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಎಲ್ಲ ವಿಷಯಗಳ ಒಂದು-ಎರಡು ಪ್ರಶ್ನೆಗಳು ಇರುತ್ತವೆ. ವಿದ್ಯಾರ್ಥಿಗಳು ಮಾಮೂಲಿ ಪರೀಕ್ಷೆಯಂತೆ ಇವುಗಳನ್ನು ಬರೆಯಬೇಕು. ಕೊನೆಗೆ ಮೌಲ್ಯಮಾಪನ ಮಾಡಿ, ವಿದ್ಯಾರ್ಥಿಗಳು ಎಲ್ಲಿ ತಪ್ಪು ಮಾಡಿದ್ದಾರೆ ಎನ್ನುವುದನ್ನು ಗುರುತಿಸಿ, ಆಯಾ ವಿದ್ಯಾರ್ಥಿಗಳಿಗೆ ಇಂತಹ ವಿಷಯದ ಮೇಲೆ ಹೆಚ್ಚಿನ ಗಮನಹರಿಸುವಂತೆ ಸಲಹೆ ನೀಡಲಾಗುತ್ತದೆ. ಪುನರಾವರ್ತಿತ ಪ್ರಶ್ನೆಗಳು ಹಾಗೂ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಯ ಬುಕ್‌ಲೆಟ್ ಮತ್ತು ಅವುಗಳಿಗೆ ಉತ್ತರವನ್ನು ಒಳಗೊಂಡಿರುವ ಬುಕ್‌ಲೆಟ್ ಅನ್ನು ಸಹ ಕೊಟ್ಟು ತರಬೇತಿ ನೀಡಲಾಗುತ್ತದೆ.

ವಿದ್ಯಾರ್ಥಿಗಳು ಮನೆಯಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭ್ಯಾಸ ಮಾಡಲಿ ಎನ್ನುವ ದೃಷ್ಟಿಯಿಂದ ತರಬೇತಿ ತರಗತಿ ಮುಗಿದ ಮೇಲೆ ಪಾಸಿಂಗ್ ಪ್ಯಾಕೇಜ್ ಬುಕ್ ನೀಡಲಾಗುತ್ತದೆ. ಇದನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ತೇರ್ಗಡೆಯಾಗುವ ಮಟ್ಟಿಗೆ ಅಂಕ ಗಳಿಸುವ ಪ್ರಾವೀಣ್ಯ ಪಡೆದುಕೊಳ್ಳಲಿ ಎನ್ನುವ ಉದ್ದೇಶ ಶಿಕ್ಷಣ ಇಲಾಖೆಯದ್ದಾಗಿದೆ.

ಮೇಲುಸ್ತುವಾರಿ ನಿಗಾ:

ತರಬೇತಿ ತರಗತಿಯು ಬಹಳ ಶಿಸ್ತಿನಿಂದ, ಕಟ್ಟುನಿಟ್ಟಾಗಿ ನಡೆಯುವ ಸಲುವಾಗಿ ಪ್ರತಿ ಕೇಂದ್ರಕ್ಕೆ ವಿದ್ಯಾರ್ಥಿಗಳ ಹಾಜರಾತಿ, ಶಿಸ್ತು ಪಾಲನೆ, ಸಮಯ ನಿರ್ವಹಿಸಲು ನಾಲ್ಕು ಜನ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲಾಗಿದೆ. ಇವರು ಅಂದು ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಸರಿಯಾಗಿ ತರಗತಿಯಲ್ಲಿ ಭಾಗವಹಿಸುವ ಬಗ್ಗೆ, ಶಿಸ್ತಿನಿಂದ ಪಾಠ ಕೇಳುವ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಾರೆ. ವಿದ್ಯಾರ್ಥಿಗಳು ಸಂಜೆಯವರೆಗೂ ಅತ್ತ-ಇತ್ತ ಹೋಗದಂತೆ ಕಲಿಕಾ ತರಗತಿಯಲ್ಲಿಯೇ ಭಾಗವಹಿಸುವಂತೆ ನೋಡಿಕೊಳ್ಳುತ್ತಾರೆ. ಇವರಲ್ಲದೆ ಆಯಾ ದಿನದ ತರಗತಿಯ ಮೇಲ್ವಿಚಾರಣೆ ನಡೆಸಿ, ನಿಗದಿತ ನಮೂನೆಯಲ್ಲಿ ಭೇಟಿಯ ವರದಿಯನ್ನು ಸಲ್ಲಿಸಲು ಪ್ರತಿ ಕೇಂದ್ರಕ್ಕೂ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ತರಬೇತಿ ತರಗತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಗ್ಗೆ 11 ಗಂಟೆ ಹಾಗೂ ಸಂಜೆ 4 ಗಂಟೆಗೆ ಹಾಲು ಮತ್ತು ಸ್ನಾೃಕ್ಸ್ ನೀಡಲಾಗುತ್ತದೆ. ಪ್ರತಿದಿನ ಮಧ್ಯಾಹ್ನ 1.30 ಗಂಟೆಗೆ ಮಧ್ಯಾಹ್ನದ ಉಪಾಹಾರ ನೀಡಲಾಗುತ್ತದೆ. ಇದರ ವಿತರಣೆ ಜವಾಬ್ದಾರಿಯನ್ನು ಇಸ್ಕಾನ್ ಸಂಸ್ಥೆ ವಹಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net