

ಬೆಳಗಾವಿ : ಕಾಂಗ್ರೆಸ್ ನಾಯಕರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುವ ಮೂಲಕ ಹರಕೆಯ ಕುರಿಯನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಂತರ ಸೋಲು ಹಾಗೂ ಅಧಿಕಾರವೂ ಇಲ್ಲದೆ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಹರಕೆಯ ಕುರಿ ಬೇಕಿತ್ತು. ಅದು ಸತೀಶ ಜಾರಕಿಹೊಳಿ ರೂಪದಲ್ಲಿ ಸಿಕ್ಕಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಾಜಕೀಯ ಕುತಂತ್ರದಿಂದಾಗಿ ಸತೀಶ ‘ಬಲಿ ಕಾ ಬಕ್ರಾ’ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಒಂದು ಕಾಲದಲ್ಲಿ ಕರ್ನಾಟಕ ರಾಜ್ಯವು ಕಾಂಗ್ರೆಸ್‌ಗೆ ಮತ್ತು ಆ ಪಕ್ಷದ ನಾಯಕರಿಗೆ ಎಟಿಎಂ ಆಗಿತ್ತು. ಆದರೆ, ಸದ್ಯ ಆ ಎಟಿಎಂ ಬಂದ್ ಆಗಿದ್ದರಿಂದ ವಿಲವಿಲ ಒದ್ದಾಡುತ್ತಿದೆ. ಅಲ್ಲದೆ, ಚುನಾವಣೆಗಳಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯೂ ಸಿಗದೆ ಸಂಕಷ್ಟಕ್ಕೆ ಒಳಗಾಗಿದೆ. ಹಾಗಾಗಿಯೇ ಉಪ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುವ ಮೂಲಕ ತಮ್ಮ ಹರಕೆ ತೀರಿಸಿದ್ದಾರೆ ಎಂದರು.
ಪಂಚರಾಜ್ಯದಲ್ಲಿ ಕಮಲಕ್ಕೆ ಬೆಂಬಲ: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೌರ್ಜನ್ಯಕ್ಕೆ ಸಾಮಾನ್ಯ ಜನರು ತತ್ತರಿಸಿದ್ದು, ಈ ಬಾರಿ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಅಧಿಕಾರಕ್ಕೇರಲಿದೆ. ಅಸ್ಸಾಂನಲ್ಲಿ ಅಧಿಕಾರ ಮುಂದುವರಿಸಲಿದೆ. ತಮಿಳುನಾಡು, ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕೇರಳದಲ್ಲೂ ಈ ಬಾರಿಗೆ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ. ಒಟ್ಟಿನಲ್ಲಿ ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲ್ಲುವ ಮೂಲಕ ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದೆ ಎಂದು ಸಿ.ಟಿ. ರವಿ ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೋಕಾಕ, ಅರಬಾವಿ ಕ್ಷೇತ್ರದಲ್ಲಿಯೇ ಬಿಜೆಪಿ ಅಭ್ಯರ್ಥಿಗೇ ಹೆಚ್ಚು ಲೀಡ್ ಸಿಗಲಿದೆ. ಈಗಾಗಲೇ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಕಳೆದ ಬಾರಿ ಕೊಟ್ಟಂತೆ ಈ ಬಾರಿ ಹೆಚ್ಚು ಮತಗಳ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿಗೆ ಪರಿಶ್ರಮದ ಮೇಲೆ ನಂಬಿಕೆಯಿದೆ. ಹಾಗಾಗಿ ಜಾರಕಿಹೊಳಿ ಹಾಗೂ ಕಾರ್ಯಕರ್ತರು, ಬೆಂಬಲಿಗರು ಪೂರ್ಣ ಪ್ರಮಾಣದಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.