ಕಂಪ್ಲಿ: ಪಟ್ಟಣದಲ್ಲಿ ಸಿವಿಲ್ ನ್ಯಾಯಾಲಯ ಆರಂಭಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ವಕೀಲರ ಬಳಗದ ಪದಾಧಿಕಾರಿಗಳು ಶಾಸಕ ಜೆ.ಎನ್.ಗಣೇಶ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನಗೆ ಸೋಮವಾರ ಮನವಿ ಸಲ್ಲಿಸಿದರು.
ವಕೀಲರ ಬಳಗದ ಕಾರ್ಯಾಧ್ಯಕ್ಷ ಕೆ.ಪ್ರಭಾಕರರಾವ್ ಮಾತನಾಡಿ, ನ್ಯಾಯಾಲಯ ಆರಂಭಿಸುವಂತೆ ಆದೇಶವಾಗಿ ಒಂದೂವರೆ ವರ್ಷವಾದರೂ ಆರಂಭಗೊಂಡಿಲ್ಲ. ನ್ಯಾಯಾಲಯಕ್ಕಾಗಿ ಕಟ್ಟಡ ಒದಗಿಸಲು ಪುರಸಭೆಯಲ್ಲಿ ಠರಾವ್ ಪಾಸ್ ಮಾಡಿದ್ದು, ಪ್ರಸ್ತಾವನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಕಿ ಉಳಿದಿದೆ. ಜಿಲ್ಲಾಧಿಕಾರಿ, ಪೌರಾಡಳಿತ ನಿರ್ದೇಶನಾಲಯದೊಂದಿಗೆ ಪತ್ರ ವ್ಯವಹಾರ ಮಾಡಿ ತ್ವರಿತಗತಿಯಲ್ಲಿ ಕಟ್ಟಡ ಒದಗಿಸಿ ಸಿವಿಲ್ ನ್ಯಾಯಾಲಯ ಆರಂಭಿಸಬೇಕು. ಪುರಸಭೆಯಲ್ಲಿ ಮತ್ತೊಮ್ಮೆ ಠರಾವ್ ಪಾಸ್ ಮಾಡಬೇಕು. ತಾಲೂಕಿನ ಜನರು, ವಕೀಲರು 50 ಕಿ.ಮೀ.ದೂರದ ಬಳ್ಳಾರಿ ನ್ಯಾಯಾಲಯಕ್ಕೆ ತೆರಳಬೇಕಿದ್ದು ತೊಂದರೆಯಾಗುತ್ತಿದೆ ಎಂದು ತಿಳಿಸಿದರು. ವಕೀಲರ ಬಳಗದ ಪದಾಧಿಕಾರಿಗಳಾದ ರಘುನಾಥರಾವ್, ಎಚ್.ನಾಗರಾಜ, ಹರೀಶ್ ಅಯ್ಯೋದಿ, ಮರಿಶೆಟ್ರು ವಿಜಯಲಕ್ಷ್ಮೀ, ಅಯ್ಯಪ್ಪ, ರುದ್ರಪ್ಪ, ಜಗದೀಶ, ಟಿ.ಶಿವಪ್ಪ, ಎಚ್.ಹುಲುಗಪ್ಪ ಇತರರಿದ್ದರು.