ಚೇರಂಗಾಲದಲ್ಲಿ ಒಂಟಿ ಸಲಗ ಹಾವಳಿ

20mdk04
Published on

ಭಾಗಮಂಡಲ: ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯ ಚೇರಂಗಾಲ ಗ್ರಾಮದಲ್ಲಿ ಒಂಟಿ ಸಲಗದ ಹಾವಳಿಯಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಸಂಜೆಯಾಗುತ್ತಿದ್ದಂತೆಯೇ ಗ್ರಾಮದೊಳಕ್ಕೆ ಬರುವ ಕಾಡಾನೆಯಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಳೆದ ಒಂದು ವಾರದಿಂದ ಈ ಆನೆ ಗ್ರಾಮದೊಳಗೆ ತಿರುಗಾಡುತ್ತಿದ್ದು, ಶಾಲಾ ಮಕ್ಕಳು ಸೇರಿದಂತೆ ಪ್ರತಿನಿತ್ಯ ಪಟ್ಟಣಕ್ಕೆ ಹೋಗಿ ಬರುವವರು ಭಯದಿಂದಲೇ ತಿರುಗಾಡುವಂತಾಗಿದೆ.


ಒಂಟಿ ಸಲಗದ ಹಾವಳಿಯಿಂದ ಕೃಷಿ ಕಾರ್ಯವನ್ನೂ ಮಾಡದಂತಾಗಿದೆ ಎಂದು ಗ್ರಾಮಸ್ಥರು ವಿಜಯವಾಣಿ ಜತೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಲವು ರೈತರ ತೋಟಕ್ಕೆ ದಾಳಿ ಮಾಡಿರುವ ಕಾಡಾನೆ ಸಾಕಷ್ಟು ಹಾನಿ ಉಂಟುಮಾಡಿದೆ. ಕೋಡಿಮನೆ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಈ ಆನೆ ಬೀಡು ಬಿಟ್ಟಿದೆ. ಕಾಫಿ, ಬಾಳೆ, ಅಡಕೆ ಗಿಡಗಳನ್ನು ದೊಡ್ಡ ಪ್ರಮಾಣದಲ್ಲಿ ನಾಶ ಮಾಡಿದೆ. ಕುದನೆಕೋಡಿ ಕುಂಞಣ್ಣ ಎಂಬವರ ಗದ್ದೆಗೆ ದಾಳಿ ಮಾಡಿರುವ ಆನೆ ನಾಟಿಗೆ ಸಿದ್ಧವಾಗಿದ್ದ ಪೈರುಗಳನ್ನು ನಾಶಪಡಿಸಿದೆ. ಸಂಪೂರ್ಣ ಪೈರು ಹಾಳಾಗಿರುವುದರಿಂದ ಈ ಬಾರಿ ಭತ್ತ ಬೆಳೆಯುವುದನ್ನೇ ಕೈ ಬಿಡುವ ನಿರ್ಧಾರಕ್ಕೆ ಕುಂಞಣ್ಣ ಬಂದಿದ್ದಾರೆ.


ಬಾಲಕೃಷ್ಣ ಎಂಬುವವರ ಅಡಕೆ, ಬಾಳೆ ತೋಟ ನಾಶವಾಗಿದೆ. ಕೋಡಿ ಮನೆ ನಂದ ಅವರ ಮನೆಗೆ ಎದುರು ಬೆಳೆದಿದ್ದ ಬಾಳೆಗಿಡಗಳನ್ನು ಹಾಳುಗೆಡವಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ತೋರಿಸಿದ್ದು, ಆನೆಯಿಂದ ಮುಂದೆ ಏನಾದರೂ ಪ್ರಾಣಹಾನಿ ಸಂಭವಿಸಿದರೆ ಇಲಾಖೆಯ ಅಧಿಕಾರಿಗಳೇ ಹೊಣೆಯಾಗಬೇಕಾದೀತು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಹಾಳಾದ ಬೆಳೆಗಳಿಗೆ ಪರಿಹಾರ ಕೊಡುವುದಕ್ಕಿಂತ ಉಪಟಳ ಕೊಡುತ್ತಿರುವ ಈ ಸಲಗವನ್ನು ಕಾಡಿಗಟ್ಟುವ ಮೂಲಕ ಶಾಶ್ವತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net