ಸ್ಮಾರ್ಟ್​ಸಿಟಿ ಕಾಮಗಾರಿ ಪರಿಶೀಲಿಸಿದ ಉಸ್ತುವಾರಿ ಕಾರ್ಯದರ್ಶಿ

New Smart city New
Published on

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ರಾಮಪ್ರಸಾದ ಮನೋಹರ್ ಅವರು ಮಂಗಳವಾರದಂದು ಪರಿಶೀಲಿಸಿದರು.

ಹುಬ್ಬಳ್ಳಿಯ ಕ್ರೀಡಾ ಸಂಕೀರ್ಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪುನರಾಭಿವೃದ್ಧಿಗೊಂಡ ತೋಳಕನಕೆರೆ ಉದ್ಯಾನಕ್ಕೆ ಭೇಟಿ ನೀಡಿ, ಸ್ವಚ್ಛತೆ ಕಾಪಾಡಲು ಹಾಗೂ ಮೂಲ ಸೌಲಭ್ಯ ಸೌಕರ್ಯಗಳ ಬಗ್ಗೆ ನಿಗಾ ವಹಿಸಲು ಸೂಚಿಸಿದರು.

ಜನಾಕರ್ಷಕ ದೀಪಗಳು, ವಿವಿಧ ಬಗೆಯ ಕಾರ್ಯಕ್ರಮಗಳು, ಐತಿಹಾಸಿಕ ಕಥೆಗಳನ್ನು ಒಳಗೊಂಡ 3ಡಿ ಚಿತ್ರಗಳನ್ನು ಅಳವಡಿಸಲು ಮುಂದಾಗಬೇಕು. ಆ ಮೂಲಕ ಉದ್ಯಾನಕ್ಕೆ ಹೆಚ್ಚು ಜನರು ಆಗಮಿಸುವಂತೆ ಪೂರಕ ವಾತಾವರಣ ನಿರ್ವಿುಸಬೇಕು. ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ವಿಮಾನ ನಿಲ್ದಾಣದಲ್ಲಿ ಇರುವಂತೆ ಉದ್ಯಾನದಲ್ಲಿ ಸ್ವಯಂ ಚಾಲಿತ ಪ್ರವೇಶ ವ್ಯವಸ್ಥೆ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕುಡಿಯುವ ನೀರು, ಕುಳಿತುಕೊಳ್ಳುವ ಆಸನಗಳ ಸ್ವಚ್ಛತೆ, ಸೂಚನಾ ಫಲಕಗಳು ಸೇರಿದಂತೆ ವಿವಿಧ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಹು-ಧಾ ಸ್ಮಾರ್ಟ್ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು, ಸ್ಮಾರ್ಟ್​ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ, ಪಾಲಿಕೆ ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ ಕಲಗೌಡ ಪಾಟೀಲ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net