

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಧಿಕಾರಿಗಳಲ್ಲಿ ಶಿಸ್ತು, ಕಾರ್ಯಬದ್ಧತೆ ಇರಬೇಕು. ಸರ್ಕಾರದಿಂದ ಜಿಲ್ಲೆಗೆ ಅನುಮೊದನೆಗೊಂಡಿರುವ ಮತ್ತು ಬಿಡುಗಡೆ ಆಗಿರುವ ಅನುದಾನದ ಸಂಪೂರ್ಣ ಬಳಕೆ ಆಗಬೇಕು. ಅನುದಾನ ಮರಳಿ ಹೋದರೆ ಅಧಿಕಾರಿಯನ್ನು ಜವಾಬ್ದಾರಗೊಳಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್‌ಪ್ರಸಾದ್ ಮನೋಹರ ವಿ. ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ, ಲೋಪ, ಕಳಪೆ ಕಂಡು ಬಂದಲ್ಲಿ ಜಿಲ್ಲಾ ಮಟ್ಟದ ಇಲಾಖಾ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಿ, ಕ್ರಮ ಕೈಗೊಳ್ಳಲಾಗುವುದು. ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಆದ್ಯತೆ ನೀಡಬೇಕು. ಸರ್ಕಾರದ ಸವಲತ್ತುಗಳು ಅರ್ಹರಿಗೆ ಮಾತ್ರ ಮುಟ್ಟಬೇಕು. ಅಭಿವೃದ್ಧಿ ಯೋಜನೆಗಳಿಗೆ ಅನುದಾನದ ಕೊರತೆ ಇದ್ದರೆ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಸಭೆಗೆ ಅನುಮತಿ ಪಡೆಯದೆ ಗೈರಾಗಿದ್ದ ಮೂವರು ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಡಾ. ರಾಮ್‌ಪ್ರಸಾದ್ ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ವಿವಿಧ ಯೋಜನೆಗಳ ಪ್ರಗತಿ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ., ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ವೇದಿಕೆಯಲ್ಲಿದ್ದರು.