

ಚಿಕ್ಕೋಡಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳು ಸಮನ್ವಯ ಸಾಧಿಸಿದ್ದರಿಂದ ಸಂಭವನೀಯ ಪ್ರವಾಹ ಸದ್ಯ ಹತೋಟಿಯಲ್ಲಿದೆ. ನದಿ ತೀರದ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ, ಮಾಂಜರಿ ಹಾಗೂ ಯಡೂರ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿದ ಅವರು, ಎನ್‌ಡಿಆರ್‌ಎಫ್ ತಂಡದೊಂದಿಗೆ ಬೋಟ್ ಮೂಲಕ ಸಂಚರಿಸಿ ಅವಲೋಕನ ನಡೆಸಿದರು. ಬಳಿಕ ಸುದ್ದಿಗಾರೊಂದಿಗೆ ಅವರು ಮಾತನಾಡಿ, ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನೋಡಲ್ ಅಧಿಕಾರಿಗಳ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಕುರಿತು ಸೂಕ್ತ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮಳೆ ಕಡಿಮೆಯಾಗಿದ್ದು, ಕೊಯ್ನ ಜಲಾಶಯವು ಶೇ.68 ಮಾತ್ರ ಭರ್ತಿಯಾಗಿದೆ. ಭಗವಂತನ ಕೃಪೆಯಿಂದ ಮಳೆ ಬಿಡುವು ನೀಡಿದರೆ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಕಡಿಮೆ ಆಗಬಹುದು. ಒಂದೊಮ್ಮೆ ಆಗ ಕೊಯ್ನ ಜಲಾಶಯದಿಂದ ಮಹಾರಾಷ್ಟ್ರ ಸರ್ಕಾರ ನೀರು ಬಿಡುಗಡೆ ಮಾಡಿದರೂ ಇಲ್ಲಿ ಎದುರಾಗಲಿರುವ ಪ್ರವಾಹ ಸ್ಥಿತಿ ನಿಭಾಯಿಸಲು ಸಾಧ್ಯವಾಗಲಿದೆ ಎಂದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಉತ್ತಮ ಪಾಟೀಲ, ರವೀಂದ್ರ ಮಿರ್ಜೆ, ಅಜಿತ ದೇಸಾಯಿ, ತಹಸೀಲ್ದಾರ್ ಸುಭಾಷ ಸಂಪಗಾವಿ, ತಾಪಂ ಇಒ ಸಮೀರ್ ಮುಲ್ಲಾ ಇತರರಿದ್ದರು.