ಜಿಲ್ಲಾ ಉಸ್ತುವಾರಿ ಮತ್ತೆ ಬದಲು! ; ಸಚಿವ ಎಂಟಿಬಿ ನಾಗರಾಜ್ ಸುಳಿವು

MTB Nagaraj
Published on

ಬೆಂಗಳೂರು ಗ್ರಾಮಾಂತರ: ರಾಜ್ಯ ರಾಜಕೀಯದ್ದೇ ಒಂದು ತೂಕವಾದರೆ ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ರಾಜಕೀಯದ್ದೇ ಮತ್ತೊಂದು ತೂಕ. ರಾಜಕೀಯ ಜಿದ್ದಾಜಿದ್ದಿಯಲ್ಲಿ ಸದಾ ಸದ್ದು ಮಾಡುವ ಹೊಸಕೋಟೆ, ಉಸ್ತುವಾರಿ ಬದಲಾವಣೆಯಿಂದ ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲ್ಲಾ ಉಸ್ತುವಾರಿಯಾಗಿ ನೇಮಿಸಿದ ಬಳಿಕ ಗ್ರಾಮಾಂತರ ಜಿಲ್ಲೆ ಬಿಜೆಪಿ ಪಾಳಯದಿಂದ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಂಟಿಬಿ ಪರ ಬ್ಯಾಟಿಂಗ್ ಮಾಡುತ್ತಿರುವ ಸ್ಥಳೀಯ ಬಿಜೆಪಿ ಮುಖಂಡರು ಎಂಟಿಬಿ ಅವರನ್ನೇ ಗ್ರಾಮಾಂತರ ಜಿಲ್ಲಾ ಉಸ್ತುವಾರಿಯಾಗಿ ಮರುನೇಮಕ ಮಾಡಬೇಕು ಎಂಬರ್ಥದಲ್ಲಿ ಪೋಸ್ಟರ್‌ಗಳನ್ನು ಹಾಕುತ್ತಿದ್ದಾರೆ. ಈ ಬಗ್ಗೆ ರಾಜ್ಯ ರಾಜಕೀಯದಲ್ಲೂ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಮತ್ತೆ ಉಸ್ತುವಾರಿ ಬದಲಾವಣೆ ಗಾಳಿ ಬೀಸಬಹುದೆಂಬ ವಿಚಾರ ಬಿಜೆಪಿಗರಲ್ಲಿ ನಿರೀಕ್ಷೆ ಗರಿಗೆದರಿಸಿದೆ.

ಸುಳಿವು ಬಿಟ್ಟ ಎಂಟಿಬಿ: ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸ್ಥಳೀಯವಾಗಿ ಬಿಜೆಪಿ ಬಲಪಡಿಸಲು ಸ್ಥಳೀಯ ನಾಯಕತ್ವ ಅವಶ್ಯ ಎಂಬ ಬಗ್ಗೆ ಬಿಜೆಪಿ ವರಿಷ್ಠರಿಗೆ ಮನದಟ್ಟು ಮಾಡುವ ಪ್ರಯತ್ನಗಳೂ ನಡೆಯುತ್ತಿವೆ. ಏತನ್ಮಧ್ಯೆ ಸಿಎಂ ಬಳಿ ಗ್ರಾಮಾಂತರ ಜಿಲ್ಲಾ ಉಸ್ತುವಾರಿ ನೀಡುವಂತೆ ಮನವಿ ಮಾಡಿದ್ದೇನೆ, ಅವರಿಂದಲೂ ಸಮ್ಮತಿ ದೊರೆಕಿದೆ ಮುಂದಿನ ದಿನಗಳಲ್ಲಿ ಮತ್ತೆ ಗ್ರಾಮಾಂತರ ಜಿಲ್ಲೆಗೆ ಉಸ್ತುವಾರಿ ವಹಿಸುವ ನಿರೀಕ್ಷೆ ಇದೆ ಎಂದು ಎಂಟಿಬಿ ಸುಳಿವು ಬಿಟ್ಟುಕೊಟ್ಟಿದ್ದಾರೆ. ಆಯಾ ಜಿಲ್ಲೆಯಲ್ಲಿ ಗೆದ್ದು ಶಾಸಕರಾಗಿರುವ ಸಚಿವರಿಗೆ ಉಸ್ತುವಾರಿ ಬದಲಾವಣೆ ಮಾಡುವಂತೆ ಬಿಜೆಪಿ ಹೈಕಮಾಂಡ್ ನಿರ್ದೇಶನವಿದೆ. ಅದರಂತೆ ಸಿಎಂ ಬದಲಾವಣೆ ಮಾಡಿದ್ದಾರೆ. ಆದರೆ ನಾನು ಗ್ರಾಮಾಂತರ ಜಿಲ್ಲೆಯಲ್ಲಿ ಗೆದ್ದು ಶಾಸಕನಾಗಿಲ್ಲ, ಬದಲಾಗಿ ವಿಧಾನಪರಿಷತ್ ಸದಸ್ಯನಾಗಿ ಸಚಿವನಾಗಿದ್ದೇನೆ, ಆದ್ದರಿಂದ ಈ ನಿಯಮ ಇಲ್ಲಿಗೆ ಅನ್ವಯಿಸುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ಹಾಗೂ ತಳಮಟ್ಟದ ಪಕ್ಷ ಸಂಘಟನೆಗೆ ಜಿಲ್ಲಾ ಉಸ್ತುವಾರಿ ನೀಡಿದರೆ ಒಳಿತು ಎಂಬುದು ಸಚಿವ ಎಂಟಿಬಿ ಇಂಗಿತವಾಗಿದೆ.

ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಲ್ಲ!: ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಲ್ಲ, ಮುಂದಿನ ಚುನಾವಣೆಯಲ್ಲಿ ಶಾಸಕರನ್ನು ಗೆಲ್ಲಿಸಿಕೊಳ್ಳುವ ಸವಾಲು ಎಂಟಿಬಿ ಮುಂದಿರುವುದರಿಂದ ಗ್ರಾಮಾಂತರ ಉಸ್ತುವಾರಿ ನೀಡುವುದು ಇಂಥ ಸಂದರ್ಭದಲ್ಲಿ ಔಚಿತ್ಯವಾಗಿದೆ ಎಂಬುದು ಸ್ಥಳೀಯ ಬಿಜೆಪಿ ಮುಖಂಡರ ಒತ್ತಾಯ.

ಕೋಲಾರ ತಿರಸ್ಕರಿಸಿದ್ದರು: ಈ ಹಿಂದೆ ಕೋಲಾರ ಉಸ್ತುವಾರಿ ವಹಿಸಿದ್ದಾಗ ಅದನ್ನು ನಯವಾಗಿಯೇ ತಿರಸ್ಕರಿಸಿ ಮತ್ತೆ ಗ್ರಾಮಾಂತರ ಜಿಲ್ಲೆ ಉಸ್ತುವಾರಿ ದಕ್ಕಿಸಿಕೊಂಡಿದ್ದರು. ಅಬಕಾರಿ ಖಾತೆ ನೀಡಿದಾಗ ಅದನ್ನು ತಿರಸ್ಕರಿಸಿ ಜನಸೇವೆಗೆ ಆದ್ಯತೆ ಇರುವ ಖಾತೆ ಬೇಕೆಂದು ಪಟ್ಟು ಹಿಡಿದಿದ್ದರು. ಈ ಬಾರಿ ಎಂಟಿಬಿ ಪ್ರಯತ್ನಕ್ಕೆ ಯಶಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.

ಆಯಾ ಜಿಲ್ಲೆಯಲ್ಲಿ ಗೆದ್ದು ಶಾಸಕರಾಗಿ ಸಚಿವರಾದವರಿಗೆ ಬೇರೆ ಜಿಲ್ಲೆಗಳ ಉಸ್ತುವಾರಿ ವಹಿಸುವಂತೆ ಬಿಜೆಪಿ ಹೈಕಮಾಂಡ್ ನಿರ್ದೇಶನವಿದೆ. ಅದರಂತೆ ಈ ಬದಲಾವಣೆ ಆಗಿದೆ. ಆದರೆ ನಾನು ಎಂಎಲ್‌ಸಿಯಾಗಿ ಸಚಿವನಾಗಿದ್ದೇನೆ. ಪಕ್ಷ ಸಂಘಟನೆ ಹಾಗೂ ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆ ಉಸ್ತುವಾರಿ ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದೇನೆ, ಆ ಕಡೆಯಿಂದಲೂ ಸಮ್ಮತಿ ಇದೆ. ಮುಂದೆ ಕಾದುನೋಡಬೇಕಿದೆ. ಎಂಟಿಬಿ ನಾಗರಾಜ್, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net