ಕೀಟ ಬಾಧೆ ಇದ್ದರೆ ಇಳುವರಿ ಕುಂಠಿತ

kunigal
ಕುಣಿಗಲ್​ ತಾಲೂಕು ಹೊಸಹಳ್ಳಿಯಲ್ಲಿ ತೆಂಗಿನ ತೋಟದಲ್ಲಿ ಕಪ್ಪುತಲೆ ಹುಳುವಿನ ಬಾಧೆ ಹತೋಟಿ ಬಗ್ಗೆ ರೈತರಿಗೆ ಅರಿವು ಮೂಡಿಸಲಾಯಿತು. ಡಾ.ವಿ.ಗೋವಿಂದೇಗೌಡ, ಡಾ.ಮನೋಜ್​, ಡಾ.ಕೀರ್ತಿಶಂಕರ್​ ಮತ್ತಿತರರು ಇದ್ದರು.
Published on

ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ವಿ.ಗೋವಿಂದೇಗೌಡ ಹೇಳಿಕೆ

ವಿಜಯವಾಣಿ ಸುದ್ದಿಜಾಲ ತುಮಕೂರು
ತೆಂಗಿನಲ್ಲಿ ಕಂಡು ಬಂದಿರುವ ಕಪ್ಪು ತಲೆ ಹುಳುವಿನ ಕೀಟ ಬಾಧೆಗೆ ಸಕಾಲದಲ್ಲಿ ಹತೋಟಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಇಳುವರಿ ಕುಂಠಿತವಾಗುತ್ತದೆ ಎಂದು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ವಿ.ಗೋವಿಂದೇಗೌಡ ರೈತರಿಗೆ ಸಲಹೆ ನೀಡಿದರು.


ಕುಣಿಗಲ್​ ತಾಲೂಕು ಯಡಿಯೂರು ಹೋಬಳಿ ಹೊಸಹಳ್ಳಿಯಲ್ಲಿ ತೆಂಗಿನ ತೋಟದಲ್ಲಿ ಕಪ್ಪುತಲೆ ಹುಳುವಿನ ಬಾಧೆ ಹತೋಟಿ ಕ್ರಮಗಳ ಬಗ್ಗೆ ಬುಧವಾರ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೆಂಗಿನಲ್ಲಿ ಕಪು$್ಪ ತಲೆ ಹುಳುವಿನ ಬಾಧೆ ಅಧಿಕವಾಗಿ ಕಂಡು ಬರುತ್ತಿದ್ದು, ಇದರಿಂದ ತೆಂಗಿನ ಇಳುವರಿ ಮೇಲೆ ಇದು ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದರು.


ಅಧಿಕ ಉಷ್ಣಾಂಶ ಪ್ರದೇಶದಲ್ಲಿ ಈ ಕಪ್ಪುತಲೆ ಹುಳುವಿನ ಕೀಟ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕೂಡಲೇ ಸೂಕ್ತ ಹತೋಟಿ ಕ್ರಮ ಕೈಗೊಳ್ಳದಿದ್ದಲ್ಲಿ
ತೆಂಗಿನಲ್ಲಿ ಇಳುವರಿ ಕುಂಠಿತವಾಗುತ್ತದೆ ಎಂದರು.


ತೋಟಗಾರಿಕೆ ವಿಜ್ಞಾನಿ ಡಾ.ಕೀರ್ತಿಶಂಕರ್​ ಮಾತನಾಡಿ, ಹುಳುವಿನ ಹಾವಳಿ ತೆಂಗಿನ ಮರದ ಕೆಳಗಿನ ಗರಿಗಳಲ್ಲಿ ಪ್ರಾರಂಭವಾಗಿ ಕ್ರಮೇಣ ಮೇಲಿನ ಗರಿಗಳಿಗೆ ಹರಡಿ ಗರಿಗಳು ಒಣಗುತ್ತವೆ. ಕೇವಲ ಮೇಲಿನ 2ರಿಂದ 3 ಗರಿಗಳು ಮಾತ್ರ ಹಸಿರಾಗಿರುತ್ತವೆ. ಇದರಿಂದ ತೆಂಗಿನ ಇಳುವರಿ ಕಡಿಮೆಯಾಗುತ್ತದೆ. ದೂರದಿಂದ ತೋಟವನ್ನು ನೋಡಿದಾಗ ತೋಟವು ಬೆಂಕಿಯಲ್ಲಿ ಸುಟ್ಟಂತೆ ಭಾಸವಾಗುತ್ತದೆ ಎಂದರು.


ಕೀಟ ತೀವ್ರವಾಗಿ ಜೈವಿಕ ಕೀಟನಾಶಕವಾದ ಶೇ.5 ರ ಅಜಾಡಿರೆಕ್ಟಿನ್​ ಅನ್ನು 1.5 ಮಿ.ಲೀ. ಪ್ರತಿ ಲೀಟರ್​ ನೀರಿಗೆ ಬೆರೆಸಿ ಮರದ ಗರಿಗಳ ಕೆಳಭಾಗಕ್ಕೆ ಸಂಪೂರ್ಣವಾಗಿ ಒದ್ದೆಯಾಗುವಂತೆ ಸಿಂಪಡಿಸಬೇಕು ಅಥವಾ 1 ಮಿಲಿ ಲೀಟರ್​ ಕೊರಾಜಿನ್​ 10 ಲೀಟರ್​ ನೀರಿನಲ್ಲಿ ಬೆರೆಸಿ ಗರಿಗಳ ತಳಭಾಗಕ್ಕೆ ಸಿಂಪಡಿಸಬೇಕು ಎಂದರು.


ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಮನೋಜ್​ ಮಾತನಾಡಿ, ತೆಂಗಿನ ಮರಗಳಿಗೆ 20ರಿಂದ 30 ಸಂಖ್ಯೆಯಲ್ಲಿ ಪರೋಪ ಜೀವಿಯಾದ ಗೋನಿಯೋಜಸ್​ ನೆಫಾಂಟಿಡಿಸ್​ ಅನ್ನು ಪ್ರತಿ ಮರಕ್ಕೆ 15 ದಿನಗಳಿಗೊಮ್ಮೆ ಕನಿಷ್ಠ 4ರಿಂದ 5 ಬಾರಿ ಬಿಡಬೇಕು. ಪರೋಪ ಜೀವಿಗಳು ಕಪ್ಪುತಲೆ ಹುಳುಗಳನ್ನು ನಿಷ್ಕಿಯಗೊಳಿಸಿ ಅವುಗಳ ಮೇಲೆ ಮೊಟ್ಟೆಯನ್ನಿಟ್ಟು ತನ್ನ ಸಂತಾನೋತ್ಪತ್ತಿ ಹೆಚ್ಚಿಸಿಕೊಂಡು ಕಪ್ಪುತಲೆ ಹುಳುವಿನ ಬಾಧೆಯನ್ನು ಹತೋಟಿ ಮಾಡುತ್ತವೆ. ಗೋನಿಯೋಜಸ್​ ನೆಫಾಂಟಿಡಿಸ್​ ಪರೋಪ ಜೀವಿಗಳನ್ನು ಪ್ರಾಯೋಗಿಕವಾಗಿ ಬಿಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.


ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಬಿ.ಎಸ್​.ಭಾಗ್ಯಲಕ್ಷ$್ಮಮ್ಮ, ಸಹಾಯಕ ತೋಟಗಾರಿಕೆ ಅಧಿಕಾರಿ ಸಿ.ಚಂದ್ರಿಕಾ ಮತ್ತಿತರರು ಇದ್ದರು.

ಹುಳು ನಿಯಂತ್ರಿಸಲು ತೋಟಗಳಲ್ಲಿ ಬಿದ್ದ ಗರಿಗಳು ಹಾಗೂ ಇತರ ಕಸಕಡ್ಡಿಗಳನ್ನು ಸಂಗ್ರಹಿಸಿ ತೋಟವನ್ನು ಸ್ವಚ್ಛವಾಗಿಡಬೇಕು. ಕೀಟ ಬಾಧೆಯ ಲಕ್ಷಣಗಳು ಕಂಡ ಕೂಡಲೇ ಬಲೆಗಳಿರುವ ಗರಿಗಳನ್ನು ಕತ್ತರಿಸಿ ಸುಡಬೇಕು. ಪ್ರತಿ ತೆಂಗಿನ ಮರದ 5-6 ಅಡಿ ಸುತ್ತ ಅರ್ಧ ಅಡಿ ಮಣ್ಣನ್ನು ತೆಗೆದು ಅರ್ಧ ಕೆಜಿ ಯೂರಿಯಾ, ಅರ್ಧ ಕೆಜಿ ಸಿಂಗಲ್​ ಸೂಪರ್​ ಫಾಸ್ಪೇಟ್​, ಅರ್ಧ ಕೆಜಿ ಪೊಟ್ಯಾಷ್​, 5ಕೆಜಿ ಬೇವಿನ ಹಿಂಡಿ, 50 ಗ್ರಾಂ ಬೋರಾಕ್ಸ್​ ಮತ್ತು ಜಿಂಕ್​ ಹಿಂಗಾರು ಹಾಗೂ ಮುಂಗಾರಿನಲ್ಲಿ ತೆಂಗಿನ ಮರಕ್ಕೆ ನೀಡಬೇಕು. | ಡಾ.ಕೀರ್ತಿಶಂಕರ್​, ತೋಟಗಾರಿಕೆ ವಿಜ್ಞಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net