ಗ್ಯಾರಂಟಿ ಯೋಜನೆಗಳ ಕುಂದುಕೊರತೆಗಳಿದ್ದಲ್ಲಿ ಕರೆ ಮಾಡಿ: ಜಿ. ಕೃಷ್ಣಪ್ಪ

bbmp meet
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಕುಂದುಕೊರತೆಗಳಿದ್ದಲ್ಲಿ ಅಂತಹ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದು ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ. ಕೃಷ್ಣಪ್ಪ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಾರ್ಯಸೂಚಿಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ 5 ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹ ಜ್ಯೋತಿ ಯೋಜನೆ ಹಾಗೂ ಯುವ ಶಕ್ತಿ ಯೋಜನೆಗಳ ಕುರಿತಾಗಿ ಸಾರ್ವಜನಿಕರು ಅಗತ್ಯ ಮಾಹಿತಿ ಅಥವಾ ಸಮಸ್ಯೆಗಳನ್ನು ಹೇಳುವ ಸಲುವಾಗಿ ದೂರವಾಣಿ ಸಂಖ್ಯೆ 9480683972 ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸರ್ಕಾರದ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಸಾರ್ವಜನಿಕರಿಂದ ಯಾವುದಾದರು ಅಹವಾಲು ಅಥವಾ ದೂರು ಬಂದರೆ ತಕ್ಷಣ ಸಂಬಂಧಪಟ್ಟ ಇಲಾಖೆಯ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಅಂತಹ ಕುಂದುಕೊರತೆ ಪರಿಶೀಲಿಸಿ, ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಂತೆ ಸೂಕ್ತ ಕ್ರಮವಹಿಸುವಂತೆ ಕೃಷ್ಣಪ್ಪ ಸೂಚಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಜನಾರ್ಧನ್, ಎಚ್.ರಮೇಶ್, ನೌಶೀರ್ ಅಹ್ಮದ್, ಬಿ.ಎಸ್.ಗೋಪಾಲಕೃಷ್ಣ, ಸದಸ್ಯ ಕಾರ್ಯದರ್ಶಿ ಅವಿನಾಶ್ ಮೆನನ್ ರಾಜೇಂದ್ರನ್, 28 ವಿಧಾನಸಭಾ ಕ್ಷೇತ್ರಗಳ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಾಲಿಕೆ ಆಡಳಿತ ವಿಭಾಗದ ವಿಶೇಷ ಆಯುಕ್ತರು ಹಾಗೂ ನೋಡಲ್ ಅಧಿಕಾರಿಗಳು ಹಾಗೂ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net