ದೂರು ಬಂದರೆ ನಿರ್ದಾಕ್ಷಿಣ್ಯ ಕ್ರಮ

SIRSI BHIMANNA NAIK
Published on

ಶಿರಸಿ: ನಗರ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಭೀಮಣ್ಣ ನಾಯ್ಕ, ಮಳೆಗಾಲದಲ್ಲಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಹಳೇ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಿಲ್ಲಲು ಅನುಕೂಲವಾಗುವಂತೆ ಶೆಡ್ ನಿರ್ವಿುಸಬೇಕು. ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ನಿಂತ ನೀರು ಸರಾಗವಾಗಿ ಹೊರ ಹೋಗಲು ಕಾಲುವೆ ನಿರ್ವಿುಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ನಗರಸಭೆಯ ಅಧಿಕಾರಿಗಳು ಮತ್ತು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಆದೇಶಿಸಿದರು.

ಕುಡಿಯುವ ಶುದ್ಧ ನೀರಿನ ಘಟಕದ ನೀರನ್ನು ಸ್ವತಃ ಕುಡಿದ ಶಾಸಕರು, ಕಾಲ ಕಾಲಕ್ಕೆ ಸೂಕ್ತ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು. ಬಳೀಕ ಬಿಡಕಿಬೈಲಿನ ತರಕಾರಿ ಮಾರಾಟದ ಆವರಣ ಪರಿಶೀಲಿಸಿ, ಪ್ರತಿನಿತ್ಯ ಕಾರ್ವಿುಕರ ಮೂಲಕ ಸ್ವಚ್ಛತೆ ನಡೆಸಬೇಕು. ಯಾವುದೇ ಕಾರಣಕ್ಕೂ ತೊಂದರೆ ನೀಡಬಾರದು. ಏನಾದರೂ ದೂರು ಬಂದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರದಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವುದು ಅನಿವಾರ್ಯ. ಕೆಲ ಕಡೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಲಕ್ಷ್ಯವಹಿಸಿ, ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಪೌರಾಯುಕ್ತ ಕಾಂತರಾಜು, ಕಂದಾಯ ಅಧಿಕಾರಿ ಆರ್.ಎಂ. ವೆರ್ಣೆಕರ, ನಗರಸಭೆ ಸದಸ್ಯ ಖಾದರ್ ಆನವಟ್ಟಿ, ಸಾರಿಗೆ ಘಟಕ ವ್ಯವಸ್ಥಾಪಕ ಸರ್ವೆಶ, ಪ್ರಮುಖರಾದ ಗಣೇಶ ದಾವಣಗೆರೆ, ಇತರರಿದ್ದರು.

ಮೊದಲ ಬಾರಿ ವಿಧಾನಸೌಧ ಪ್ರವೇಶಿಸಿ, ಅಧಿವೇಶನದಲ್ಲಿ ಪಾಲ್ಗೊಂಡಿರುವುದು ಹೊಸ ಅನುಭವ ನೀಡಿದೆ. ಪ್ರಶ್ನೋತ್ತರ ಕಲಾಪ ವೀಕ್ಷಿಸಿ ಅಪಾರ ಅನುಭವ ಪಡೆದೆ. ಕಲಿಯುವುದು ಇನ್ನೂ ಸಾಕಷ್ಟಿದೆ. ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶಾಸಕನಾಗಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. | ಭೀಮಣ್ಣ ನಾಯ್ಕ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net