ಅನಾಹುತವಾದರೆ ‘ಕೈ’ ಸರ್ಕಾರವೇ ನೇರ ಹೊಣೆ

MND BJP PROTEST
Published on

ಮುಂಡಗೋಡ: ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಸಂಪೂರ್ಣವಾಗಿ ಅವರ ಪರವಾಗಿ ನಿಂತಿದೆ. ಇದೇ ತೆರನಾದ ನಿಲುವುಗಳನ್ನು ಮುಂದುವರಿಸಿದಲ್ಲಿ ರಾಜ್ಯದಲ್ಲಿ ಮುಂದಾಗುವ ಅನಾಹುತಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಸೋಮವಾರ ಹೇಳಿದರು.

ರೈತರ ಜಮೀನುಗಳನ್ನು ವಕ್ಛ್ ಬೋರ್ಡ್ ತಮ್ಮ ಹೆಸರಿಗೆ ಮಾಡಿಕೊಂಡಿರುವುದನ್ನು ವಿರೋಧಿಸಿ ತಾಲೂಕು ಬಿಜೆಪಿ ಘಟಕದಿಂದ ಪಟ್ಟಣದ ಶಿವಾಜಿ ವೃತ್ತದಲ್ಲಿ ಪ್ರತಿಭಟಿಸಿ ಅರ್ಧ ಗಂಟೆ ಮಾನವ ಸರಪಳಿ ನಿರ್ವಿುಸಿ ಸರ್ಕಾರ ಹಾಗೂ ಸಚಿವ ಜಮೀರ್ ಅಹ್ಮದ್ ವಿರುದ್ಧ ಘೊಷಣೆ ಕೂಗಲಾಯಿತು.

ವಿಜಯಪುರ ಜಿಲ್ಲೆಯ ರೈತರ 1,500 ಎಕರೆ ಜಮೀನು ವಕ್ಛ್ ಆಸ್ತಿಯೆಂದು ಘೊಷಿಸಿ ತಹಸೀಲ್ದಾರ್​ರಿಂದ ಪುಷ್ಟೀಕರಿಸಿ ನೋಟಿಸ್ ನೀಡಿ ನಂತರ ಬಿಜೆಪಿಯ ಒತ್ತಾಯದಿಂದ ಹಿಂಪಡೆಯಲಾಗಿದೆ. ವಕ್ಸ್ ಬೋರ್ಡ್​ನಿಂದ ಆಗುತ್ತಿರುವ ಈ ರೀತಿಯ ಗೊಂದಲಗಳು ರಾಜ್ಯದಲ್ಲಿನ ಸಾಮರಸ್ಯ ಹದಗೆಡಲು ಕಾರಣವಾಗಿದೆ. ಸರ್ಕಾರ ವಿವೇಚನೆಯಿಲ್ಲದೆ ಕೈಗೊಳ್ಳುತ್ತಿರುವ ನಿರ್ಧಾರಗಳಿಂದಾಗಿ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯ ಬೀದಿಗೆ ಬರುತ್ತಿದೆ ಎಂದು ಆರೋಪಿಸಿದರು.

ಜಿಪಂ ಮಾಜಿ ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿ, ಸಿದ್ದರಾಮಯ್ಯನವರು ಅಧಿಕಾರಿಗಳ ಸಭೆ ನಡೆಸಿ ಪಹಣಿ ಪತ್ರದಲ್ಲಿ ವಕ್ಪ್ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ. ಬಿಜೆಪಿಯು ಇದನ್ನು ಎಂದಿಗೂ ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ಇದು ಮರಣ ಶಾಸನವಾಗಿಯೇ ಮುಂದುವರಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ, ಮಹೇಶ ಹೊಸಕೊಪ್ಪ ಮಾತನಾಡಿದರು. ತಹಸೀಲ್ದಾರ್ ಶಂಕರ ಗೌಡಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಅಶೋಕ ಚಲವಾದಿ, ವಿಠ್ಠಲ ಬಾಳಂಬೀಡ, ಬಸವರಾಜ ತನಿಖೆದಾರ, ಪಿ.ಜಿ. ತಂಗಚನ್, ಪ್ರಕಾಶ ಬಡಿಗೇರ, ಶ್ರೀಕಾಂತ ಸಾನು, ಚಿದಾನಂದ ಬಡಿಗೇರ, ಸಂತೋಷ ತಳವಾರ, ತುಕಾರಾಮ ಇಂಗಳೆ, ನಿಂಗಜ್ಜ ಕೋಣನಕೇರಿ, ಸುನೀಲ ವೆರ್ಣೆಕರ, ವಿನಾಯಕ ರಾಯ್ಕರ, ಉಮೇಶ ಗಾಣಿಗೇರ, ಲೇಸಮ್ಮಾ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net