

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯದ ಸ್ಥಳೀಯರಿಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡಬೇಕು ಎಂದು ಪಕ್ಷದ ಮುಖಂಡರಿಗೆ, ಪ್ರಮುಖರಿಗೆ ಆಗ್ರಹಿಸಲು ವಿವಿಧ ಅಂಜುಮನ್ ಎ ಇಸ್ಲಾಂ ಸಂಸ್ಥೆಗಳ ವತಿಯಿಂದ ತೀರ್ವನಿಸಲಾಗಿದೆ.
ಧಾರವಾಡ ಮತ್ತು ಹಾವೇರಿ ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಶಿಗ್ಗಾಂವಿ, ಸವಣೂರು, ತಡಸ, ಬಂಕಾಪುರ, ಕರಡಗಿ, ಹುಲಗೂರು ಸೇರಿ 13 ಅಂಜುಮನ್ ಸಂಸ್ಥೆಗಳ ಸುಮಾರು 300 ಜನ ಮುಖಂಡರು ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ಭಾನುವಾರ ನಡೆಸಿದ ಸಭೆಯಲ್ಲಿ ಈ ಸಂಬಂಧ ಒಮ್ಮತದ ನಿರ್ಣಯಕ್ಕೆ ಬರಲಾಗಿದೆ. ಈ ಕುರಿತು ಮೊಹರಂ ಹಬ್ಬದ ಬಳಿಕ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಧಾರವಾಡ ಮತ್ತು ಹಾವೇರಿ ಲೋಕಸಭೆ ಕ್ಷೇತ್ರಗಳಲ್ಲಿ ಇರುವ 36-37 ಲಕ್ಷ ಮತದಾರರಲ್ಲಿ ಸುಮಾರು 9 ಲಕ್ಷ ಮುಸ್ಲಿಮ್ು ಇದ್ದಾರೆ. 1972ರಿಂದ ಹುಬ್ಬಳ್ಳಿ (ಈಗಿನ ಹು-ಧಾ ಪೂರ್ವ ಮೀಸಲು) ತಪ್ಪಿದರೆ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಮುಸ್ಲಿಂರಿಗೆ ಟಿಕೆಟ್ ನೀಡುತ್ತ ಬರಲಾಗಿದೆ. ಮುಂಬರುವ ಉಪ ಚುನಾವಣೆಯಲ್ಲಿ ನಮ್ಮ ಸಮುದಾಯವರಿಗೆ ಟಿಕೆಟ್ ತಪ್ಪಬಹುದು ಎಂದು ಅಲ್ಲಿಯ (ಹಾವೇರಿ ಜಿಲ್ಲೆ) ಅಂಜುಮನ್ ಸಂಸ್ಥೆಗಳಿಗೆ ಅನಿಸಿದೆ. ಆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಅಂಜುಮನ್ ಸಂಸ್ಥೆಗಳ ನೇತೃತ್ವದಲ್ಲಿ ಸಭೆ ನಡೆಸಬೇಕು ಎಂಬುದು ಅಲ್ಲಿಯವರ ಅಗ್ರಹವಾಗಿತ್ತು ಎಂದು ಹೇಳಿದರು.
ಮೊಹರಂ ಬಳಿಕ ಮೊದಲಿಗೆ ಸಚಿವರಾದ ಜಮೀರ್ ಅಹ್ಮದ್, ರಹಿಂ ಖಾನ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇವೆ. ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಲಿದ್ದೇವೆ. ಕಾಂಗ್ರೆಸ್ ಪಕ್ಷ ಮುಸ್ಲಿಮ್ಗೆ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸವಿದೆ. ಟಿಕೆಟ್ ನೀಡದಿದ್ದರೆ ಮುಂದಿನ ಕ್ರಮ ಏನು ಎಂಬುದರ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಶಿಗ್ಗಾಂವಿ ಕ್ಷೇತ್ರದಲ್ಲಿ ಯಾಸೀರ್ ಖಾನ್ ಪಠಾಣ, ಅಜ್ಜಂಪೀರ ಖಾದ್ರಿ ಸೇರಿ ಹಲವು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ನಿರ್ದಿಷ್ಟವಾಗಿ ಇಂತವರಿಗೆ ಟಿಕೆಟ್ ನೀಡಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಗಿಲ್ಲ. ಸ್ಥಳೀಯ ಮುಸ್ಲಿಮ್ಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದಾರೆ. ಅವರ ಬೇಡಿಕೆಯನ್ನು ಪಕ್ಷದ ವರಿಷ್ಠರಿಗೆ ಮುಟ್ಟಿಸಲಾಗುವುದು ಎಂದರು.
ಧಾರವಾಡ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಮಾಜಿ ಮೇಯರ್ ಐ.ಎಂ. ಜವಳಿ, ಪಾಲಿಕೆ ಸದಸ್ಯ ಮೊಹಮ್ಮದ್ ಭದ್ರಾಪುರ, ಇತರರು ಇದ್ದರು.