

ಬೋರಗಾಂವ: ಕಲುಷಿತ ನೀರು ಪೂರೈಕೆ ಮತ್ತು ಸೊಳ್ಳೆಗಳ ಹಾವಳಿಯಿಂದ ಪಟ್ಟಣದ 4 ಜನರಲ್ಲಿ ಡೆಂಗ್ಯೂ ಮತ್ತು 10 ಅಧಿಕ ಜನರಲ್ಲಿ ಕಾಮಾಲೆ ರೋಗ ಕಂಡುಬಂದಿರುವ ಕುರಿತು ವರದಿಯಾಗಿವೆ.
ಈ ಹಿನ್ನೆಲೆಯಲ್ಲಿ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಪಟ್ಟಣ ಪಂಚಾಯಿತಿ ನಿರ್ಲಕ್ಷೃದ ವಿರುದ್ಧ ಜನರು ಚಿಮಾರಿ ಹಾಕುತ್ತಿದ್ದಾರೆ. ಇಚಲಕರಂಜಿಯಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಕಾಮಾಲೆ ರೋಗಿಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕೆಲವು ರೋಗಿಗಳಲ್ಲಿ ಕಣ್ಣುಗಳು ಹಳದಿಯಾಗುವುದು, ಜ್ವರ, ನಿರಂತರ ಆಯಾಸ, ಹಸಿವಿನ ಕೊರತೆ, ವಾಂತಿ, ಹೊಟ್ಟೆ ನೋವು ಮತ್ತು ಗಾಢ ಬಣ್ಣದ ಮೂತ್ರ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪಟ್ಟಣದಲ್ಲಿ ಹೆಚ್ಚಿರುವ ಸೊಳ್ಳೆಯಿಂದ ಈಗಾಗಲೇ ನಾಲ್ವರಲ್ಲಿ ಡೆಂಗ್ಯೂ ಕಂಡುಬಂದಿದೆ.
ಈ ಕುರಿತು ಆರೋಗ್ಯ ಇಲಾಖೆ ಮತ್ತು ಪಪಂ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಜತೆಗೆ ಪಟ್ಟಣದ ನಿವಾಸಿಗಳಿಗೆ ಕುಡಿಯಲು ಶುದ್ಧ ನೀರು ಪೂರೈಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.