ಬಿಜೆಪಿಯಲ್ಲಿ ಭಿನ್ನಮತ

BJP
Published on

ಬೆಳಗಾವಿ: ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಯಾಗಿದ್ದು, ಅವರ ಸರ್ಕಾರ ಶೀಘ್ರ ಪತನಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟದಲ್ಲಿರುವ ಅರ್ಧಕ್ಕಿಂಥ ಹೆಚ್ಚು ಸಚಿವರು ಬೇರೆ ಪಕ್ಷದಿಂದ ಹೋದವರೇ ಆಗಿದ್ದಾರೆ. ಈಗ ಅವರೆಲ್ಲರೂ ಮತ್ತೆ ಅಸಮಾಧಾನಗೊಂಡಿದ್ದು, ಇದು ಸರ್ಕಾರಕ್ಕೆ ಮುಳುವಾಗಲಿದೆ. ಸರ್ಕಾರ ಬೀಳಲಿ ಎಂದು ನಾವು ಯಾವುದೇ ತಂತ್ರ ಮಾಡಬೇಕಾದ ಅಗತ್ಯವಿಲ್ಲ. ತಾನಾಗಿಯೇ ಪತನಗೊಳ್ಳಲಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಭ್ರಮೆ: ಬಿಜೆಪಿ ಸರ್ಕಾರ ಪತನಗೊಳ್ಳುತ್ತದೆ ಎಂಬ ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಹೇಳಿಕೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಸರ್ಕಾರ ಪತನಗೊಳ್ಳುತ್ತದೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಕಾಂಗ್ರೆಸ್‌ಗೆ ಆದ ಆಘಾತ ಬಿಜೆಪಿಗೆ ಆಗುತ್ತದೆ ಎಂದುಕೊಂಡಿದ್ದಾರೆ. ನಮ್ಮ ಸರ್ಕಾರ ಪೂರ್ಣಾವಧಿವರೆಗೆ ಇರಲಿದೆ ಎಂದಿದ್ದಾರೆ.

ಸೂರ್ಯ, ಚಂದ್ರರ ಉದಯ ಎಷ್ಟು ಸತ್ಯವೋ, ನಮ್ಮ ಸರ್ಕಾರ ಮುಂದುವರಿಯುವುದೂ ಅಷ್ಟೇ ಸತ್ಯ. ನಮ್ಮ ನಾಯಕರು ಒಟ್ಟಾಗಿ ಹೋಗುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಪಡೆಯುತ್ತದೆ. ಆವಾಗಲೂ ನಾವು 5 ವರ್ಷ ಅಧಿಕಾರ ಪೂರೈಸುತ್ತೇವೆ. ಕಾಂಗ್ರೆಸ್ ನಾಯಕರು ತಮ್ಮ ಭ್ರಮೆಯಿಂದ ಹೊರಬರಬೇಕು ಎಂದು
ಆರ್.ಬಿ. ತಿಮ್ಮಾಪುರ ಅವರಿಗೆ ಚಾಟಿ ಬೀಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net