ಭಸ್ಮದಲ್ಲಿದೆ ಸಾತ್ವಿಕತೆಯ ಶಕ್ತಿ

In Bhasma is the power of Sattvik
Published on

ನರೇಗಲ್ಲ: ಹಣೆಯಲ್ಲಿ ವಿಭೂತಿ, ಕೊರಳಲ್ಲಿ ಲಿಂಗ ಮತ್ತು ರುದ್ರಾಕ್ಷಿ ಧಾರಣೆ ವೀರಶೈವ ಲಿಂಗಾಯತ ಧರ್ಮದ ಪ್ರಮುಖ ಆಚರಣೆಗಳು. ನಿತ್ಯವೂ ಇವುಗಳನ್ನು ಧಾರಣೆ ಮಾಡುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ನೀವು ಹಣೆಯಲ್ಲಿ ಧರಿಸುವ ಭಸ್ಮದಲ್ಲಿ ಸಾತ್ವಿಕತೆಯ ಕಳೆ ಇದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಸಮೀಪದ ಅಬ್ಬಿಗೇರಿಯ ಹೊಸ ಹಿರೇಮಠದಲ್ಲಿ ಭಾನುವಾರ 4ನೇ ದಿನದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ, ಆಶೀರ್ವಚನ ನೀಡಿದರು.

ವಿಭೂತಿ, ಬಸಿತ, ಭಸ್ಮ, ರಕ್ಷಾ ಮತ್ತು ಕ್ಷಾರ ಎಂಬ ಐದು ಭಸ್ಮಗಳಿವೆ. ನಂದಾ, ಭದ್ರಾ, ಸುರಭಿ, ಸುಶೀಲ ಮತ್ತು ಸುಮನ ಎಂಬ ಐದು ಹಸುಗಳ ಶುದ್ಧ ಗೋಮಯದಿಂದ ತಯಾರಾಗುತ್ತವೆ. ವಿಭೂತಿ ಧಾರಣೆಯಿಂದ ಸಂಪತ್ತು, ಬಸಿತ ಧಾರಣೆಯಿಂದ ಶಿವಜ್ಞಾನ, ಭಸ್ಮ ಧಾರಣೆಯಿಂದ ತಾಪ-ಪಾಗಳು ದೂರ, ರಕ್ಷಾ ಧಾರಣೆಯಿಂದ ಚರ್ಮ ರೋಗಗಳು ಇಲ್ಲವಾಗುತ್ತವೆ ಮತ್ತು ಕ್ಷಾರ ಧಾರಣೆಯಿಂದ ದುಷ್ಟ ಶಕ್ತಿಗಳ ಕಾಟವೇನಾದರೂ ಇದ್ದರೆ ಅದು ತೊಲಗಿ ಹೋಗುತ್ತದೆ. ಇಷ್ಟೊಂದು ಶಕ್ತಿ ಭಸ್ಮ ಮತ್ತು ವಿಭೂತಿಯಲ್ಲಿರುವಾಗ ಅದನ್ನು ಧರಿಸಲು ನೀವುಗಳು ಯಾವುದೇ ಕಾರಣಕ್ಕೂ ಹಿಂದೇಟು ಹಾಕಬಾರದು ಎಂದು ಜಗದ್ಗುರುಗಳು ಹೇಳಿದರು.

ವೀರಶೈವ ಧರ್ಮದಲ್ಲಿ ಅಧ್ಯಾತ್ಮದ ಸಂಪತ್ತು ಇದೆ. ಆದರೆ, ಅದರ ಸದ್ಬಳಕೆಯ ಬಗ್ಗೆ ತಿಳಿವಳಿಕೆ ಎಲ್ಲರಿಗೂ ಇಲ್ಲ. ತಿಳಿದವರು ಇತರರಿಗೆ ತಿಳಿಸುವ ಕಾರ್ಯವಾಗಬೇಕು. ವೀರಶೈವ ಧರ್ಮದ ಆಚರಣೆಯನ್ನು ಜನರಿಗೆ ಮನವರಿಕೆ ಮಾಡುವುದು ಧರ್ವಚಾರ್ಯರ ಕರ್ತವ್ಯವಾಗಿದೆ. ಶ್ರೀ ಜ.ರೇಣುಕಾಚಾರ್ಯರು ಭೋದಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ವೀರಶೈವರ ಧರ್ಮದ ತತ್ವಗಳನ್ನು ಸಾಕಷ್ಟು ವೈಜ್ಞಾನಿಕ ತಳಹದಿಯ ಮೇಲೆ ಪ್ರತಿಪಾದಿಸಿದ್ದಾರೆ. ಮನುಷ್ಯ ಮಾನಸಿಕ ಗೊಂದಲದಲ್ಲಿದ್ದಾನೆ. ಸಿದ್ಧಾಂತ ಶಿಖಾಮಣಿಯಲ್ಲಿನ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಂದರವಾಗುತ್ತದೆ. ಅವನ ಮಾನಸಿಕ ಗೊಂದಲ ದೂರಾಗುತ್ತದೆ. ನಮ್ಮ ಧರ್ಮದ ಲಾಂಛನಗಳನ್ನು ನಾವು ಧರಿಸಿಕೊಳ್ಳಲು ಯಾವುದೇ ಆತಂಕ ಬೇಡ ಎಂದರು.

ಬಾದಾಮಿ ನವಗ್ರಹ ಹಿರೇಮಠದ ಶಿವಪೂಜಿ ಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟ-ಅಬ್ಬಿಗೇರಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ಬಿಗೇರಿ ಸಿದ್ದರ ಬೆಟ್ಟದ ಶ್ರೀ ವೀರಭದ್ರ ಶ್ರೀಗಳು, ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಯಡಿಯೂರಿನ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಳಲಿಯ ಡಾ. ನಾಗಭೂಷಣ ಶಿವಾಚಾರ್ಯರು, ನಾಗವಂದ ಶ್ರೀ ಶಿವಯೋಗಿ ಶಿವಾಚಾರ್ಯರು, ಸಂಗೊಳ್ಳಿಯ ಶ್ರೀ ಗುರುಲಿಂಗ ಶಿವಾಚಾರ್ಯರು, ಶಾಸಕ ಜಿ.ಎಸ್. ಪಾಟೀಲ ಉಪಸ್ಥಿತರಿದ್ದರು.

ರೋಣ, ಜಿಗಳೂರು, ಹೊಸಳ್ಳಿ, ಇಟಗಿ ಹಾಗೂ ಅಬ್ಬಿಗೇರಿ ಗ್ರಾಮದ 4ನೇ ವಾರ್ಡ್​ನ ಮಹಿಳೆಯರು ಕುಂಭ ತೆಗೆದುಕೊಂಡು ಬಂದು ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net