ಬಾಣಂತಿಯರ ಸಾವಲ್ಲಿ ವೈದ್ಯರ ಬೇಜವಾಬ್ದಾರಿ, ನಿರ್ಲಕ್ಷವಿಲ್ಲ

Published on

ಬಳ್ಳಾರಿ : ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿನ ನಾಲ್ವರು ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ತಜ್ಞರ ತಂಡವು, ವೈದ್ಯರ ಬೇಜವಾಬ್ದಾರಿತನ, ನಿರ್ಲಕ್ಷ್ಯತನ ಕಂಡುಬಂದಿಲ್ಲ. ಐವಿ ರಿಂಜರ್ ಲ್ಯಾಕ್ಟೇಟ್ ದ್ರವದ ಉಪಯೋಗವು ಕಾರಣವಾಗಿರುತ್ತದೆ ಎಂದು ಸಂಶಯಿಸಲಾಗಿದ್ದು, ಈ ದ್ರವದ ಗುಣಮಟ್ಟ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ ಎಂದು ವರದಿ ಸಲ್ಲಿಸಿದೆ.

ಜಿಲ್ಲಾಸ್ಪತ್ರೆಯಲ್ಲಿನ ನಾಲ್ವರು ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನೇಮಿಸಿರುವ ಮೂವರು ತಜ್ಞರು ತಂಡವು, ಇದೇ ನ.೧೪ ರಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ತನಿಖೆ ನಡೆಸಿದ್ದು, ಜಿಲ್ಲಾಸ್ಪತ್ರೆಯಲ್ಲಿನ ಬಾಣಂತಿಯರ ಸಾವಿಗೆ ತಜ್ಞರು ಮತ್ತು ಇತರೆ ಸಿಬ್ಬಂದಿಗಳ ಬೇಜವಾಬ್ದಾರಿತನ ಅಥವಾ ನಿರ್ಲಕ್ಷತೆ ಕಂಡುಬಂದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಸಿಜೇರಿಯನ್ ಶಸ್ತ್ರಚಿಕಿತ್ಸೆಗಳಿಗೆ ನೀಡಬಹುದಾದ ಚಿಕಿತ್ಸಾ ವಿಧಾನ, ಆರೋಗ್ಯದಲ್ಲಿ ಏರುಪೇರಾದಾಗ ಕೂಡಲೇ ನೀಡುವ ತುರ್ತು ಚಿಕಿತ್ಸೆ, ಮುಂತಾದ ವಿಧಾನಗಳಲ್ಲಿ ಲೋಪದೋಷಗಳು ಕಂಡುಬಂದಿಲ್ಲ. ಆಸ್ಪತ್ರೆಯ ತಂಡವು ಗುಣಮಟ್ಟದ ಆರೈಕೆಯನ್ನು ನೀಡಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಬಾಣಂತಿಯರ ಸಾವುಗಳು ಸಂಭವಿಸಿದೆ ಎಂದು ತಜ್ಞರ ಸಮಿತಿಯು ವರದಿಯಲ್ಲಿ ತಿಳಿಸಿದೆ.

ನಾಲ್ವರು ಬಾಣಂತಿಯರ ಸಾವಿನ ಪ್ರಕರಣದಲ್ಲಿ ಮೆ| ಪಶ್ಚಿಮ ಬಂಗಾ ಫಾರ್ಮಸ್ಯೂಟಿಕಲ್ಸ್ ಲಿ. ಕಂಪನಿಯು ಸರಬರಾಜು ಮಾಡಿರುವ ಐವಿ ರಿಂಜರ್ ಲ್ಯಾಕ್ಟೇಟ್ ದ್ರವದ ಉಪಯೋಗವು ಕಾರಣವಾಗಿರುತ್ತದೆ ಎಂದು ಸಂಶಯಿಸಲಾಗಿದೆ. ಈ ಐವಿ ರಿಂಜರ್ ಲ್ಯಾಕ್ಟೇಟ್ ದ್ರವದ ಮಾದರಿಗಳನ್ನು ಗುಣಮಟ್ಟದ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಸಮಿತಿಯು ವರದಿಯಲ್ಲಿ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net