ಬೆಳಗಾವಿಯಲ್ಲಿ ಶೀಘ್ರವೇ ಲ್ಯಾಬ್

26ravig3B-Web
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅಧ್ಯಕ್ಷತೆಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಹಮ್ಮಿಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಅಧಿಕಾರಿಗಳೊಂದಿಗೆ ಸಭೆ ಜರುಗಿತು. ಕೇಂದ್ರ ಸಚಿವ ಸುರೇಶ ಅಂಗಡಿ, ಸಚಿವರಾದ ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಇತರರು ಇದ್ದರು.
Published on

ಬೆಳಗಾವಿ: ಬೆಳಗಾವಿಯಲ್ಲಿ ಕರೊನಾ ವೈರಸ್ ಪತ್ತೆಗಾಗಿ ಗಂಟಲು ಮಾದರಿ ತಪಾಸಣಾ ಪ್ರಯೋಗಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಲ್ಯಾಬ್ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ವೈದ್ಯರು, ಸಿಬ್ಬಂದಿ ಸೇರಿ ಅಗತ್ಯ ಸಲಕರಣೆ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ಪ್ರಯೋಗಾಲಯ ಕಾರ್ಯಾರಂಭಕ್ಕೆ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ತುರ್ತು ಸಾಮಗ್ರಿ ಆಥವಾ ಸಲಕರಣೆಗಳ ಬಗ್ಗೆ ತಕ್ಷಣವೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಬೇಕು. ನಾವೆಲ್ಲರೂ 21 ದಿನಗಳ ಕಡ್ಡಾಯವಾಗಿ ಲಾಕ್‌ಡೌನ್ ಪಾಲಿಸಿದಾಗ ಮಾತ್ರ ಕರೊನಾ ತಡೆಗಟ್ಟಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಇದಕ್ಕೆ ಕಟ್ಟುನಿಟ್ಟಿನ
ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಗತ್ಯ ವಸ್ತು ಪೂರೈಸಿ: ಜನರು ಒಂದೇ ಕಡೆ ಸೇರದಂತೆ ಮಾರುಕಟ್ಟೆ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸುವ ಮೂಲಕ ಎಲ್ಲೆಡೆ ಅಗತ್ಯ ವಸ್ತುಗಳು ಲಭಿಸುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ತರಕಾರಿ ಮತ್ತು ದಿನಸಿ ಸಾಮಗ್ರಿಗಳನ್ನು ಸರಿಯಾಗಿ ತಲುಪಿಸಿದರೆ ಜನಸಂದಣಿ ನಿಯಂತ್ರಣ ಸೇರಿದಂತೆ ಅನೇಕ ಸಮಸ್ಯೆ ನಿವಾರಿಸಬಹುದು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಎಲ್ಲ ಜನಪ್ರತಿನಿಧಿಗಳಿಗೂ ಕಳುಹಿಸಿ. ಅವರ ಮೂಲಕ ಆಯಾ ಕ್ಷೇತ್ರದಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜನರ ಸಹಕಾರ ಅಗತ್ಯ: ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಮಾತನಾಡಿ, ಸರಕು ಸಾಮಗ್ರಿಗಳ ಸಾಗಣೆಗೆ ಯಾವುದೇ ನಿರ್ಬಂಧವಿಲ್ಲ. ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುನ್ನೆಚ್ಚರಿಕೆ ಮೇರೆಗೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಅಂಗನವಾಡಿ ಮಕ್ಕಳಿಗೆ ಮನೆ ಮನೆಗೆ ಆಹಾರ ಸಾಮಗ್ರಿ ಕಳುಹಿಸಲಾಗುತ್ತಿದೆ ಎಂದರು.

326 ಜನರ ಮೇಲೆ ನಿಗಾ: ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಈಗಾಗಲೇ ಹೊರದೇಶಗಳಿಂದ ಹಾಗೂ ಅನ್ಯ ರಾಜ್ಯಗಳಿಂದ ಜಿಲ್ಲೆಗೆ ಬಂದಿರುವ 326 ಜನರ ಮೇಲೆ ನಿಗಾ ವಹಿಸಲಾಗಿದೆ. ಅವರ ಮನೆಯಲ್ಲಿಯೇ ಕ್ವಾರಂಟೈನ್ ಇರಿಸಲಾಗಿದೆ. ಹತ್ತು ಜನರ ಮಾದರಿ ಕಳಿಸಲಾಗಿದ್ದು, ಎಲ್ಲ ಮಾದರಿಯ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

ಪಾಸ್ ಸೌಲಭ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಅಗತ್ಯ ವಸ್ತುಗಳ ಕೊರತೆಯಾಗದಂತೆ ಎಲ್ಲ ರೀತಿಯ ಸರಕು ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಅವಶ್ಯಕತೆ ಇರುವ ಜನರಿಗೆ ಪಾಸ್ ಒದಗಿಸಲಾಗಿದೆ ಎಂದರು.

ಸಭೆಯಲ್ಲಿ ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ಮಹೇಶ ಕುಮಠಳ್ಳಿ, ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡರ, ಮಹದೇವಪ್ಪ ಯಾದವಾಡ, ಅನಿಲ ಬೆನಕೆ, ಡಿ.ಎಂ. ಐಹೊಳೆ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ ಕುಮಾರ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಲೂಕು ಆಸ್ಪತ್ರೆಗೂ ವೆಂಟಿಲೇಟರ್ ಒದಗಿಸಿ: ಗ್ರಾಮೀಣ ಪ್ರದೇಶದಲ್ಲಿಯೂ ಚಿಕಿತ್ಸೆಗಾಗಿ ವೆಂಟಿಲೇಟರ್ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರದಿಂದ ತುರ್ತು ಅನುದಾನ ಬಂದರೆ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಶಾಸಕ ಸತೀಶ ಜಾರಕಿಹೊಳಿ ಮನವಿ ಮಾಡಿದರು. ಕಾರ್ಖಾನೆಗಳಲ್ಲಿ ನೂರಾರು ಕಾರ್ಮಿಕರು ಒಂದೇ ಕಡೆ ಕೆಲಸ ಮಾಡುತ್ತಿರುವುದರಿಂದ ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರು ಆಗಾಗ ಭೇಟಿ ನೀಡಿ ಸೂಕ್ತ ನಿಗಾ ವಹಿಸಬೇಕು ಎಂದೂ ಸಲಹೆ ನೀಡಿದರು.
ತೀವ್ರ ತಪಾಸಣೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮಾತನಾಡಿ, ಸರ್ಕಾರದ ನಿರ್ದೇಶನದ ಮೇರೆಗೆ ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಗಡಿಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಪ್ರತ್ಯೇಕ ಕೋವಿಡ್ ಆಸ್ಪತ್ರೆ ಸ್ಥಾಪನೆಯ ಸಾಧ್ಯತೆಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ. ಮುನ್ನೆಚ್ಚರಿಕೆಯಿಂದ ಈಗಾಗಲೇ ಜಿಲ್ಲೆಯಲ್ಲಿ 1825 ಕ್ವಾರಂಟೈನ್ ವಾರ್ಡ್ ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತುರ್ತು ಸಂದರ್ಭದಲ್ಲಿ ಅನುಕೂಲವಾಗುವಂತೆ ಮೊರಾರ್ಜಿ ವಸತಿ ಶಾಲೆಗಳಲ್ಲೂ 200 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ವ್ಯಾಪಕವಾಗಿ ಐಇಸಿ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಸಭೆಗೆ ವಿವರಿಸಿದರು.

ನೆರೆಯ ರಾಜ್ಯಗಳ ಮತ್ತು ಬೆಂಗಳೂರಿನಿಂದ ನೂರಾರು ಸಂಖ್ಯೆಯ ಯುವಕರು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಹೀಗೆ ಬರುವ ಜನರ ಮೇಲೆ ತೀವ್ರ ನಿಗಾ ವಹಿಸಬೇಕು. | ಡಾ. ಪ್ರಭಾಕರ್ ಕೋರೆ ರಾಜ್ಯಸಭಾ ಸದಸ್ಯ ಜಿಲ್ಲೆಯಲ್ಲಿ ತುರ್ತಾಗಿ ಪ್ರಯೋಗಾಲಯ ಆರಂಭಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದ್ದು, ಜನರು ಸಹಕರಿಸಬೇಕು.| ರಮೇಶ ಜಾರಕಿಹೊಳಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net