

ತಿ.ನರಸೀಪುರ: ಭತ್ತಕ್ಕೆ ಬೆಂಬಲ ಬೆಲೆಯೊಂದಿಗೆ ಹೆಚ್ಚುವರಿಯಾಗಿ ಕ್ವಿಂಟಾಲ್ಗೆ 500 ರೂ. ಪ್ರೋತ್ಸಾಹ ಧನವನ್ನು ಘೋಷಣೆ ಮಾಡುವ ಮೂಲಕ ರಾಜ್ಯ ಸರ್ಕಾರ ತುರ್ತಾಗಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿದೆ.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಈ ಸಂಬಂಧ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರನ್ನು ಭೇಟಿಯಾದ ರೈತ ನಾಯಕರು ಹಾಗೂ ಮುಖಂಡರು, ಭತ್ತಕ್ಕೆ ಪ್ರೋತ್ಸಾಹ ಧನ ಘೋಷಣೆ ಮಾಡಿ, ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಮನವಿ ಸಲ್ಲಿಸಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಜಿಲ್ಲೆಯಲ್ಲಿ ನರಸೀಪುರ ಸೇರಿದಂತೆ ಕೆ.ಆರ್.ನಗರ, ಹಾಗೂ ನಂಜನಗೂಡು ಪ್ರದೇಶದಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆದಿದ್ದು, ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ 2,320 ರೂ.ಗಳನ್ನು ನಿಗದಿ ಪಡಿಸಲಾಗಿದೆ. ಇದು ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಗೆ 500 ರೂ. ಹೆಚ್ಚುವರಿಯಾಗಿ ಪ್ರೋತ್ಸಾಹಧನ ನೀಡುವ ಮೂಲಕ ರೈತರಿಗೆ ನಷ್ಟ ತಪ್ಪಿಸಬೇಕು. ರೈತರು ಕೂಡ ನಿಗದಿತ ದರಕ್ಕಿಂತ ಕಡಿಮೆ ಬೆಲೆಗೆ ಭತ್ತವನ್ನು ಮಾರಾಟ ಮಾಡಬಾರದು. ಪರಿಸ್ಥಿತಿಯ ಲಾಭ ಪಡೆಯಲು ಭತ್ತವನ್ನು 2320 ರೂ.ಗಿಂತ ಕಡಿಮೆ ಬೆಲೆಗೆ ಭತ್ತ ಖರೀದಿಸುವ ಖರೀದಿದಾರರ ಮೇಲು ಆಯಾಯ ತಾಲೂಕು ಆಡಳಿತ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಮಾತನಾಡಿ, ಈಗಾಗಲೇ ಕೇರಳ, ಒಡಿಸಾ ಹಾಗೂ ತೆಲಂಗಾಣ ರಾಜ್ಯಗಳು ಭತ್ತದ ಬೆಳೆಗೆ ಪ್ರೋತ್ಸಾಹ ಧನ ನೀಡುತ್ತಿರುವುದರಿಂದ ತಾಲೂಕು ಆಡಳಿತ ರೈತರ ರಕ್ಷಣೆಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು. ತಾಲೂಕಿನ ಕಬಿನಿ - ಕಾವೇರಿ ಅಚ್ಚುಕಟ್ಟು ಬಾಗದಲ್ಲಿ ಭತ್ತದ ಬೆಳೆ ಕಟಾವು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಬೆಲೆ ಮತ್ತಷ್ಟು ಕುಸಿತವಾದರೆ ರೈತರು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮ ಕೈಗೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ರೈತ ಮುಖಂಡರಾದ ಅರುಣ್ ಕುಮಾರ್, ಬನ್ನೂರು ಸೂರಿ, ಕುಂತನಹಳ್ಳಿ ಕುಳ್ಳೇಗೌಡ, ಸಿ.ಲಿಂಗಣ್ಣ, ನಂಜುಂಡಸ್ವಾಮಿ, ಉಮೇಶ್, ರವಿಕುಮಾರ್ ಇತರರು ಇದ್ದರು.