ಪ್ರತ್ಯೇಕ ಪ್ರಕರಣದಲ್ಲಿ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ಹಣ ವಂಚನೆ

cybe crime
Published on

ಮೈಸೂರು: ವಿಜಯನಗರ 3ನೇ ಹಂತದ ಬಿ.ಭಾರ್ಗವಿ, ವಿಜಯನಗರ 4ನೇ ಹಂತದ ಬಿ.ಹರಿಪ್ರಸಾದ್ ಹಾಗೂ ಜೆ.ಪಿ.ನಗರದ ಗೃಹಿಣಿ ಸುಷ್ಮಾ ಪ್ರದೀಪ್ ಪ್ರತ್ಯೇಕ ಪ್ರಕರಣಗಳಲ್ಲಿ ಆನ್‌ಲೈನ್ ಮೂಲಕ ವಂಚನೆಗೊಳಗಾಗಿದ್ದು, ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಈ ಮೂವರು ನೀಡಿದ ದೂರಿನ ಮೇರೆಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ- 1: ಜೆಪಿ ನಗರದ ಗೃಹಿಣಿ ಸುಷ್ಮಾ ಪ್ರದೀಪ್(45) ಅವರಿಗೆ ಟೆಲಿಗ್ರಾಂ ಗ್ರೂಪ್ ಮೂಲಕ ವರ್ಕ್ ಫ್ರಮ್ ಹೋಂ ಲಿಂಕ್ ರವಾನಿಸಲಾಗಿದೆ. ಹಣ ಹೂಡಿಕೆ ಮಾಡಿ ಟಾಸ್ಕ್ ನಿರ್ವಹಿಸಿದರೆ ಲಾಭ ಬರಲಿದೆ ಎಂದು ನಂಬಿದ ಸುಷ್ಮಾ ಅವರು ಹಂತ ಹಂತವಾಗಿ 6,25,075 ರೂ. ವರ್ಗಾವಣೆ ಮಾಡಿ ವಂಚನೆಗೊಳಲಾಗಿದ್ದಾರೆ.

ಪ್ರಕರಣ-2: ವಿಜಯನಗರ 3ನೇ ಹಂತದ ನಿವಾಸಿ ಬಿ. ಭಾರ್ಗವಿ(31) ಅವರಿಗೆ ವಂಚಕ ತನಿಖಾಧಿಕಾರಿ ಹೆಸರಲ್ಲಿ ಕರೆ ಮಾಡಿ ವಂಚಿಸಿದ್ದಾನೆ. ಮುಂಬೈನಲ್ಲಿ 200 ಗ್ರಾಂ ಮಾದಕ ವಸ್ತು ವಶ ಪಡಿಸಿಕೊಳ್ಳಲಾಗಿದೆ. ಸೆಂಡರ್ ಡೀಟೈಲ್ಸ್ ಪರಿಶೀಲಿಸಿದಾಗ ನಿಮ್ಮ ಹೆಸರಿದೆ ಎಂದು ಬೆದರಿಸಿದ್ದಾನೆ. ಜತೆಗೆ ನಿಮ್ಮ ಆಧಾರ್ ಸಂಖ್ಯೆ ಬಳಸಿ ದೆಹಲಿ ಮತ್ತು ಬಿಹಾರ್‌ನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಅಕ್ರಮ ಹಣ ವರ್ಗಾವಣೆಯಾಗಿದೆ ಭಯ ಪಡಿಸಿದ್ದಾನೆ. ಬಳಿಕ ಈ ಸಂಬಂಧ ಆರ್‌ಬಿಐನಿಂದ ಫೈನಾನ್ಶಿಯಲ್ ತನಿಖೆ ಮಾಡಬೇಕು. ಅದಕ್ಕಾಗಿ 96,100 ರೂ. ಪಾವತಿಸಿ. ನೀವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟರೆ ನಿಮ್ಮ ಹಣವನ್ನು ಹಿಂತಿರುಗಿಸಲಾಗುತ್ತದೆ ಎಂದು ತಿಳಿಸಿದ್ದಾನೆ. ಹಾಗಾಗಿ, ಭಾರ್ಗವಿಯವರು 96,100 ರೂ. ವರ್ಗಾವಣೆ ಮಾಡಿ ವಂಚನೆಗೊಳಗಾಗಿದ್ದಾರೆ.

ಪ್ರಕರಣ-3: ವಿಜಯನಗರ 4ನೇ ಹಂತದ ನಿವಾಸಿ ಬಿ. ಹರಿಪ್ರಸಾದ್ (48) ಇನ್‌ಸ್ಟಾಗ್ರಾಂನಲ್ಲಿ ಹಣ ಹೂಡಿಕೆ ಸಂಬಂಧಿಸಿದ ಪೋಸ್ಟ್‌ನ ಮೆಸೇಜ್ ಬಾಕ್ಸ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನಮೂದಿಸಿದ್ದಾರೆ. ನಂತರ ಅವರನ್ನು ಸಂಪರ್ಕಿಸಿದ ವಂಚಕರು, ಪ್ರತ್ಯೇಕವಾಗಿ ವಾಟ್ಸ್ ಆ್ಯಪ್ ಗ್ರೂಪ್‌ವೊಂದರಲ್ಲಿ ಅವರನ್ನು ಸೇರಿಸಿ. ಆಕರ್ಷಕ ಉಡುಗೊರೆಗಳ ಬಗ್ಗೆ ವಿವರಿಸಿದ್ದಾರೆ. ಇದಕ್ಕೆ ಮರುಳಾದ ಹರಿಪ್ರಸಾದ್, 49,93,475 ರೂ. ವರ್ಗಾವಣೆ ಮಾಡಿದ್ದಾರೆ. ಇವರ ಹೂಡಿಕೆಗೆ ದೊಡ್ಡ ಮೊತ್ತದ ಲಾಭ ಬಂದಿದೆ ಎಂದು ಗ್ರೂಪ್‌ನಲ್ಲಿ ತೋರಿಸಲಾಗಿದೆ. ಅದನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸಿ ವಿಫಲರಾಗುವ ಮೂಲಕ ವಂಚನೆಗೊಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net